ಬೆಂಗಳೂರು: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಅರಿಯಲು ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ, ತಕ್ಷಣವೇ 5 ಸಾವಿರ ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಭಾನುವಾರ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ 1 ಲಕ್ಷ ಕೋಟಿ ರೂ.ನಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ.
10 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಅನೇಕ ಬ್ರಿಡ್ಜ್ಗಳು ಬಿದ್ದಿವೆ. ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಸರ್ಕಾರ, ಖಾಸಗಿ ಆಸ್ತಿ ಪಾಸ್ತಿ ನಾಶವಾಗಿದೆ. ಸರ್ಕಾರದ ಮೂಲಗಳ ಪ್ರಕಾರ 25 ಜನ ಸಾವಿಗೀಡಾಗಿದ್ದಾರೆ. 25 ಜನ ಕಾಣೆಯಾಗಿದ್ದಾರೆ. ಜಾನುವಾರುಗಳು ಸಾವಿಗೀಡಾಗಿವೆ. ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ 126 ಕೋಟಿ ರೂ ನೀಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಅದು ರಾಜ್ಯಕ್ಕೆ ಬರಬೇಕಾಗಿರುವ ಎನ್‌ಡಿ ಆರ್‌ಎಫ್ ನಿಧಿ ಹಣ. ನರೇಗಾ ಬಾಕಿ ಹಣ ಬಿಡುಗಡೆ ಮಾಡಿದ್ದರೂ, ಅದರಿಂದ ಪ್ರವಾಹ ಪರಿಹಾರ ನೀಡಲು ಬರುವುದಿಲ್ಲ. ಕೂಡಲೇ ಪ್ರಧಾನಿ ತಕ್ಷಣ ರಾಜ್ಯಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ಕೇಂದ್ರದಿಂದ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸದೇ ಭಾವನಾತ್ಮಕ ವಿಷಯಗಳ ಮೇಲೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಯಡಿಯೂರಪ್ಪ ಏಕ ಪಾತ್ರಾಭಿನಯ: ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಎಲ್ಲ ಕಡೆ ತಿರುಗಾಡಿ ಪರಿಹಾರ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಇದರಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಅಗತ್ಯ ಇದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಬೇಕು. ಸುಮಾರು 2.5 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಖಾಸಗಿ ವೈದ್ಯರ ಸಹಕಾರ ಪಡೆದು ಅವರ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಜಾನುವಾರುಗಳಿಗೆ ಮೇವು, ಔಷಧ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ವಿಪತ್ತು ಘೋಷಣೆ: ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಹ ಬಂದಿದ್ದರೂ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ರಾಜ್ಯಕ್ಕೆ ಒಂದು ರೂಪಾಯಿಯೂ ಕೊಟ್ಟಿಲ್ಲ. ಕೇರಳ, ಮಹಾರಾಷ್ಟಕ್ಕೆ ಹೆಚ್ಚಿನ ಪರಿಹಾರದ ಹಣ ನೀಡಿದ್ದಾರೆ. ರಾಜ್ಯದಿಂದ ಬಿಜೆಪಿಯ 26 ಜನ ಸಂಸದರನ್ನು ಕಳುಹಿಸಿಕೊಟ್ಟಿದ್ದಾರೆ. ಆದ್ಯತೆ ಮೇಲೆ ಹಣ ಬಿಡೆಗಡೆ ಮಾಡಬೇಕಿತ್ತು. ಇಂತಹ ವಿಷಯದಲ್ಲಿ ಮಲತಾಯಿ ಧೋರಣೆ ತೋರಬಾರದು ಎಂದು ಹೇಳಿದರು.
ವೈದ್ಯರ ಸಲಹೆ ಪಡೆದು ಹೋಗುತ್ತೇನೆ: ನನಗೆ ಕಣ್ಣಿನ ಆಪರೇಷನ್ ಆಗಿದೆ. ಹದಿನೈದು ದಿನ ಹೊರಗಡೆ ತಿರುಗಾಡದಂತೆ ವೈದ್ಯರು ಸೂಚಿಸಿದ್ದಾರೆ. ನಾನು ಇಂತ ಸಂದರ್ಭದಲ್ಲಿ ಯಾವತ್ತೂ ಮನೆಯಲ್ಲಿ ಕೂರುವುದಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ದಿನಕ್ಕೆ ಮೂರು ಬಾರಿ ಸಂಪರ್ಕ ಮಾಡುತ್ತಿದ್ದೇನೆ. ಸಂಕಷ್ಟದಲ್ಲಿ ಸಿಲುಕಿದವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ನನ್ನ ಮಗನನ್ನು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಳುಹಿಸಿಕೊಟ್ಟಿದ್ದೇನೆ. ವೈದ್ಯರು ಸೂಚಿಸಿದರೆ, ಕೇವಲ ಬಾದಾಮಿಗಷ್ಟೇ ಅಲ್ಲ, ಮಲೆನಾಡು ಸೇರಿದಂತೆ ಪ್ರವಾಹ ಪೀಡಿತ ಎಲ್ಲ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.