Advertisement

ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಪಾಲ್ಗೊಳ್ಳದ ಕೇರಳ: ಪಿಳ್ಳೈ ಆರೋಪ

01:05 AM Sep 26, 2018 | Karthik A |

ಕೋಯಿಕ್ಕೋಡ್‌: ವಾರ್ಷಿಕ 5 ಲಕ್ಷ ರೂ.ಗಳ ರಕ್ಷೆಯನ್ನು ಒದಗಿಸುವ ಉದ್ದೇಶದ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಅನುಷ್ಠಾನಗೊಳಿಸಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯರಾಗಬಹುದು ಮತ್ತು ಅದರ ಶ್ರೇಯ ಅವರಿಗೆ ಸಲ್ಲಬಹುದೆಂಬ ಭೀತಿಯಿಂದ ಕೇರಳ ಈ ಯೋಜನೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಆರೋಪಿಸಿದ್ದಾರೆ.

Advertisement

‘ಈಗಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ (ಆರ್‌ಎಸ್‌ಬಿವೈ) 1,250 ರೂ.ಗಳ ಪ್ರೀಮಿಯಂ ಅನ್ನು ಠೇವಣಿಯಿರಿಸಿದಾಗ 30,000 ರೂ.ಗಳ ರಕ್ಷೆ ಲಭ್ಯವಾಗುತ್ತದೆ. ಆದರೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಜನರು 1,110 ರೂ.ಗಳ ಪ್ರೀಮಿಯಂಗೆ 5 ಲಕ್ಷ ರೂ.ಗಳ ರಕ್ಷೆಗೆ ಅರ್ಹರಾಗುತ್ತಾರೆ. ಅದು ಕಿಡ್ನಿ ರೋಗಿಗಳ ಸಹಿತ ಎಲ್ಲರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂಥ ಯೋಜನೆಯನ್ನು ತಿರಸ್ಕರಿಸಲು ರಾಜ್ಯ ಸರಕಾರಕ್ಕೆ ಎಷ್ಟು ಧೈರ್ಯ?’ ಎಂದವರು ಕೋಯಿಕ್ಕೋಡ್‌ ಪ್ರಸ್‌ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಪ್ರಶ್ನಿಸಿದರು.

ರಾಜಕೀಯ ವೈಷಮ್ಯ
ಆಯುಷ್ಮಾನ್‌ ಭಾರತ್‌ ಯೋಜನೆ ಒಂದು ಹಗರಣವೆಂಬ ಸಚಿವ ಥೋಮಸ್‌ ಇಸಾಕ್‌ ಅವರ ಆರೋಪಕ್ಕೆ ಉತ್ತರಿಸಿದ ಪಿಳ್ಳೆ, ಇಸಾಕ್‌ ಅವರು ಓರ್ವ ವಂಚಕನಾಗಿರುವುದರಿಂದ ಅವರು ಹಾಗೆ ತಿಳಿದಿರಬಹುದು. ಸರಕಾರ ಕುರುಡು ರಾಜಕೀಯ ವೈಷಮ್ಯದಿಂದಾಗಿ ಕೇಂದ್ರ ಸರಕಾರದ ಉಪಯುಕ್ತ ಯೋಜನೆಯೊಂದನ್ನು ಅನುಷ್ಠಾನಗೊಳಿಸುವುದಕ್ಕೆ ಹಿಂದೇಟು ಹಾಕುತ್ತಿದೆ ಎಂದರು. ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದಲ್ಲಿ ಬಿಜೆಪಿ ಪ್ರಬಲ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದವರು ಹೇಳಿದರು.

‘ಮೂವರು ಪಾದ್ರಿಗಳು  ಬಿಜೆಪಿಯನ್ನು ಸೇರಿದ್ದಾರೆಂಬುದು ನಿಜ. ಭವಿಷ್ಯದಲ್ಲಿ ಇನ್ನಷ್ಟು ಮಂದಿ ಪಕ್ಷವನ್ನು ಸೇರಲಿದ್ದಾರೆ. ಬಿಜೆಪಿ ಕುರಿತು ಅಲ್ಪಸಂಖ್ಯಾಕರಲ್ಲಿ ಆತಂಕವನ್ನು ಸೃಷ್ಟಿಸುವ ರಮೇಶ್‌ ಚೆನ್ನಿತ್ತಲ ಮತ್ತು ಕೊಡಿಯೇರಿ ಬಾಲಕೃಷ್ಣನ್‌ ಅವರ ತಂತ್ರ ಇನ್ನು ಮುಂದಕ್ಕೆ ಫ‌ಲಪ್ರದವಾಗದು’ ಎಂದವರು ನುಡಿದರು. 

ಕೊಚ್ಚಿಯಲ್ಲಿ ರಾಜ್ಯ ಮಂಡಳಿ ಸಭೆ
ಬಿಜೆಪಿಯ ರಾಜ್ಯ ಮಂಡಲಿ ಸಭೆ ಸೆ. 26 ಮತ್ತು 27ರಂದು ಕೊಚ್ಚಿಯಲ್ಲಿ ನಡೆಯಲಿದೆಯೆಂದು ಪಿಳ್ಳೆ ಅವರು ಇದೇ ವೇಳೆ ಪ್ರಕಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next