Advertisement

5 ರನ್‌ ಸೋಲು; ಸರಣಿ ಕಳಕೊಂಡ ಭಾರತ “ಎ’

10:13 AM Jan 27, 2020 | sudhir |

ಕ್ರೈಸ್ಟ್‌ಚರ್ಚ್‌: ಗೆಲುವಿನ ಹಾದಿಯಲ್ಲಿದ್ದ ಭಾರತ “ಎ’ ಕೊನೆಯ ಹಂತದಲ್ಲಿ ನಾಟಕೀಯ ಕುಸಿತ ಅನುಭವಿಸಿ 3 ಪಂದ್ಯಗಳ ಏಕದಿನ ಸರಣಿ ಯಲ್ಲಿ ನ್ಯೂಜಿಲ್ಯಾಂಡ್‌ “ಎ’ಗೆ 1-2 ಅಂತರದಿಂದ ಶರಣಾಗಿದೆ.

Advertisement

ಕ್ರೈಸ್ಟ್‌ಚರ್ಚ್‌ನಲ್ಲಿ ರವಿವಾರ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ “ಎ’ 7 ವಿಕೆಟಿಗೆ 270 ರನ್‌ ಪೇರಿಸಿ ಸವಾಲೊಡ್ಡಿದರೆ, ಭಾರತ “ಎ’ 49.4 ಓವರ್‌ಗಳಲ್ಲಿ 265ಕ್ಕೆ ಆಲೌಟ್‌ ಆಗಿ 5 ರನ್‌ ಸೋಲಿಗೆ ತುತ್ತಾಯಿತು.

ಇಶಾನ್‌ ಹೋರಾಟ ವ್ಯರ್ಥ
ಉತ್ತಮ ಆರಂಭ ಪಡೆದ ಭಾರತ, ಕೊನೆಯಲ್ಲಿ ಕೀಪರ್‌ ಇಶಾನ್‌ ಕಿಶನ್‌ ಸಾಹಸದಿಂದ ಬ್ಯಾಟಿಂಗ್‌ ಹೋರಾಟವನ್ನು ಜಾರಿಯಲ್ಲಿರಿಸಿತ್ತು. ಕೊನೆಯ ಓವರ್‌ನಲ್ಲಿ ಭಾರತದ ಜಯಕ್ಕೆ 2 ವಿಕೆಟ್‌ಗಳಿಂದ 7 ರನ್‌ ಅಗತ್ಯವಿತ್ತು. ಆದರೆ ಇಶಾನ್‌ ಕಿಶನ್‌ 2ನೇ ಎಸೆತದಲ್ಲಿ ಸಿಂಗಲ್‌ ತೆಗೆದದ್ದೇ ದುಬಾರಿಯಾಗಿ ಪರಿಣಮಿಸಿತು. ಪೇಸ್‌ ಬೌಲರ್‌ ಕೈಲ್‌ ಜಾಮೀಸನ್‌ ಮುಂದಿನೆರಡು ಎಸೆತಗಳಲ್ಲಿ ಸಂದೀಪ್‌ ವಾರಿಯರ್‌ ಮತ್ತು ಇಶಾನ್‌ ಪೋರೆಲ್‌ ಅವರನ್ನು ಬೌಲ್ಡ್‌ ಮಾಡಿ ಭಾರತದ ಜಯವನ್ನು ಕಸಿದುಕೊಂಡೇ ಬಿಟ್ಟರು. 71 ರನ್‌ ಮಾಡಿದ್ದ ಇಶಾನ್‌ ಕಿಶನ್‌ ಈ ಪತನವನ್ನು ಇನ್ನೊಂದು ತುದಿಯಲ್ಲಿ ಅಸಹಾಯಕರಾಗಿ ನಿಂತು ನೋಡಬೇಕಾಯಿತು.

ಇದಕ್ಕೂ ಹಿಂದಿನ ಓವರ್‌ನಲ್ಲಿ ಎಡಗೈ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದರು. ಬೇರೂರಿ ನಿಂತಿದ್ದ ಅಕ್ಷರ್‌ ಪಟೇಲ್‌ (32) ಮತ್ತು ರಾಹುಲ್‌ ಚಹರ್‌ (0) ಅವರನ್ನು ಔಟ್‌ ಮಾಡಿ ಕಿವೀಸ್‌ಗೆ ಮೇಲುಗೈ ಒದಗಿಸಿದ್ದರು. 39ನೇ ಓವರ್‌ ಅಂತ್ಯಕ್ಕೆ 188ಕ್ಕೆ 6 ವಿಕೆಟ್‌ ಕಳೆದುಕೊಂಡು ಸಂಕಟದಲ್ಲಿದ್ದ ಭಾರತಕ್ಕೆ ಇಶಾನ್‌ ಕಿಶನ್‌-ಅಕ್ಷರ್‌ ಪಟೇಲ್‌ 69 ರನ್‌ ಜತೆಯಾಟದ ಮೂಲಕ ಭರವಸೆ ಮೂಡಿಸಿದ್ದರು.

ಭಾರತದ ಚೇಸಿಂಗ್‌ ಉತ್ತಮ ಮಟ್ಟದಲ್ಲಿತ್ತು. ಪೃಥ್ವಿ ಶಾ (55)-ರುತುರಾಜ್‌ ಗಾಯಕ್ವಾಡ್‌ (44) ಮೊದಲ ವಿಕೆಟಿಗೆ 12.3 ಓವರ್‌ಗಳಿಂದ 79 ರನ್‌ ಪೇರಿಸಿದ್ದರು. ನಾಯಕ ಮಾಯಾಂಕ್‌ ಅಗರ್ವಾಲ್‌ 24 ರನ್‌ ಮಾಡಿದರು. 23ನೇ ಓವರ್‌ ವೇಳೆ ಭಾರತ ಒಂದಕ್ಕೆ 126 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್‌ ಯಾದವ್‌ (5), ವಿಜಯ್‌ ಶಂಕರ್‌ (19), ಕೃಣಾಲ್‌ ಪಾಂಡ್ಯ (7) ವಿಫ‌ಲರಾದರು.

Advertisement

ಚಾಪ್‌ಮನ್‌ ಅಜೇಯ ಶತಕ
22ಕ್ಕೆ 3 ವಿಕೆಟ್‌, ಬಳಿಕ 105ಕ್ಕೆ 6 ವಿಕೆಟ್‌ ಉದುರಿಸಿಕೊಂಡು ಪರದಾಡುತ್ತಿದ್ದ ಕಿವೀಸ್‌ ಮಾರ್ಕ್‌ ಚಾಪ್‌ಮನ್‌ ಅವರ ಅಜೇಯ 110 ರನ್‌ ಪರಾಕ್ರಮದಿಂದ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಚಾಪ್‌ಮನ್‌ 98 ಎಸೆತಗಳಿಂದ ಈ ಇನ್ನಿಂಗ್ಸ್‌ ಕಟ್ಟಿದರು (10 ಬೌಂಡರಿ, 1 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌ “ಎ’-7 ವಿಕೆಟಿಗೆ 270 (ಚಾಪ್‌ಮನ್‌ ಅಜೇಯ 110, ಬ್ಲಿಂಡೆಲ್‌ 37, ಫಿಲಿಪ್ಸ್‌ 35, ಪೋರೆಲ್‌ 64ಕ್ಕೆ 3, ಚಹರ್‌ 49ಕ್ಕೆ 2). ಭಾರತ “ಎ’-49.4 ಓವರ್‌ಗಳಲ್ಲಿ 265 (ಇಶಾನ್‌ ಕಿಶನ್‌ ಅಜೇಯ 71, ಶಾ 55, ಗಾಯಕ್ವಾಡ್‌ 44, ಪಟೇಲ್‌ 32, ಅಗರ್ವಾಲ್‌ 24, ಜಾಮೀಸನ್‌ 49ಕ್ಕೆ 4, ಅಜಾಜ್‌ 44ಕ್ಕೆ 3, ರವೀಂದ್ರ 43ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next