Advertisement

ಚಳಿ ಬಿಡಿಸೋ 5 ಆಸನಗಳು 

02:00 PM Jan 03, 2018 | |

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಕರಿಸುವ 5 ಯೋಗಾಸನ ಭಂಗಿಗಳು ಇಲ್ಲಿವೆ. “ಮೈಮೇಲಿಂದ ಬೆಡ್‌ಶೀಟ್‌ ತೆಗೆಯಲು ಮನಸ್ಸೇ ಬಾರದ ಈ ಚಳಿಗಾಲದ ದಿನಗಳಲ್ಲಿ ಯೋಗಾಸನವೇ?’ ಎಂದು ಹೌಹಾರದಿರಿ! ಈ 5 ಆಸನಗಳನ್ನು ಬೆಳಗ್ಗೆ ಅಭ್ಯಾಸ ಮಾಡಿದ್ದೇ ಆದರೆ ಮೈ ಬೆಚ್ಚಗಿರುವುದು ಮಾತ್ರವಲ್ಲ, ಕೀಲು ನೋವು, ಸಂಧಿ ನೋವುಗಳಿಂದ ಮುಕ್ತಿಯನ್ನೂ ಪಡೆಯಬಹುದು. ಅಂದಹಾಗೆ ಪರಿಣತ ಯೋಗಪಟುಗಳ ಉಪಸ್ಥಿತಿಯಲ್ಲಿ ಅಭ್ಯಾಸ ಮಾಡಿದರೆ ಇನ್ನೂ ಒಳ್ಳೆಯದು.

Advertisement

1. ಉತ್ತನಾಸನ
ತುಂಬಾ ಸರಳವಾದ ಈ ಆಸನದಿಂದ ತೊಡೆಯ ಮಾಂಸಖಂಡ ಮತ್ತು ಹೊಟ್ಟೆ ಭಾಗದಲ್ಲಿರುವ ಮಾಂಸಖಂಡಗಳು ಶಕ್ತಿಯುತವಾಗುತ್ತವೆ. ಮೊದಲು ನೇರವಾಗಿ ನಿಂತುಕೊಳ್ಳಬೇಕು. ಕೈಗಳನ್ನು ಬದಿಯಲ್ಲಿ ನೀಡಿಕೊಳ್ಳಿ. ಈಗ ಮುಂದಕ್ಕೆ ಬಾಗಿ. ಕೈಗಳು ನೆಲ ಮುಟ್ಟುವಂತಿರಲಿ. ಮುಂದಕ್ಕೆ ಬಾಗುವ ಮುನ್ನ ಜೋರಾಗಿ ಉಸಿರೆಳೆದುಕೊಳ್ಳಿ. ಮುಂದಕ್ಕೆ ಬಾಗುವಾಗ ಉಸಿರು ಬಿಡಿ. ಕೆಲ ನಿಮಿಷಗಳವರೆಗೆ ಬಗ್ಗಿಕೊಂಡೇ ಇರಿ. ಆಮೇಲೆ ಹಿಂದಿನ ಭಂಗಿಗೆ, ಅಂದರೆ ನೇರವಾಗಿ ನಿಂತುಕೊಂಡ ಭಂಗಿಗೆ ವಾಪಸ್ಸಾಗಿ.

2. ಕಪಾಲಭಾತಿ
ಟಿ.ವಿ.ಯಲ್ಲಿ ಈ ಯೋಗಾಸನವನ್ನು ನೋಡಿಯೇ ಇರುತ್ತೀರಿ. ಬಾಬಾ ರಾಮ್‌ದೇವ್‌ ಅವರಿಗೆ ಜನಪ್ರಿಯತೆ ತಂದುಕೊಟ್ಟ ಆಸನವೆಂದರೆ ಇದೇ. ಮೊದಲು ಪದ್ಮಾಸನ ಹಾಕಿ ಚಾಪೆ ಮೇಲೆ ಕುಳಿತುಕೊಳ್ಳಿ. ಕೈಗಳನ್ನು ಹಸ್ತ ಮೇಲೆ ಬರುವಂತೆ ಮಂಡಿ ಮೇಲಿಡಿ. ಈಗ ದೀರ್ಘ‌ವಾಗಿ ಉಸಿರೆಳೆದುಕೊಳ್ಳಿ. ನಂತರ ಜೋರಾಗಿ, ಬಲವಂತವಾಗಿ ಉಸಿರನ್ನು ಹೊರಬಿಡಿ. ಹೊರಬಿಡುವಾಗ ಹೊಟ್ಟೆಯನ್ನು ಒಳಗೆಳೆದುಕೊಳ್ಳಬೇಕು. ಒಮ್ಮೆಗೇ 20 ಬಾರಿ ಇದನ್ನು ಪುನರಾವರ್ತಿಸಬೇಕು. ಕೊಂಚ ಬಿಡುವಿನ ನಂತರ ಮತ್ತೆ ಮುಂದುವರಿಸಿ. ಈ ಆಸನವನ್ನು ಒಟ್ಟು ಮೂರು 3 ಸೆಟ್‌ ಮಾಡಬೇಕು.

3. ವೀರಭದ್ರಾಸನ
ಮೂರು ನಾಲ್ಕು ಅಡಿ ಅಂತರ ಬರುವಂತೆ ಕಾಲನ್ನು ಅಗಲಿಸಿ ನಿಲ್ಲಿ. ಎರಡೂ ಕೈಗಳನ್ನು ತೋಳಿನ ಲೆವೆಲ್‌ಗೆ ಚಾಚಿರಿ. ಪಾದವನ್ನು ಬಲ ಬದಿಗೆ ಪಾಯಿಂಟ್‌ ಮಾಡಿ, ಎಡಗಾಲಿನ ಪಾದ ಮುಂದಕ್ಕೆ ಚಾಚಿರಲಿ. ಬಲಗಾಲಿನ ಮಂಡಿಯೂರಿ, ಚಾಚಿರುವ ಬಲಗೈಯತ್ತ ಮುಖ ಮಾಡಿ. ಕೆಲ ನಿಮಿಷಗಳವರೆಗೆ ಇದೇ ಭಂಗಿಯಲ್ಲಿ ನಿಲ್ಲಿ. ನಂತರ ಎದ್ದು ನಿಂತು ಎಡಬದಿಯಲ್ಲಿ  ಪುನರಾವರ್ತಿಸಿ.

4.ಸುಕಿರಂದ್ರಾಸನ
ಚಾಪೆ ಮೇಲೆ ಬೆನ್ನಡಿ ಮಾಡಿ ಮಲಗಿ. ಮಂಡಿಯನ್ನು ಬಾಗಿಸಿ ಪಾದವನ್ನು ನೆಲಕ್ಕೆ ಊರಿ. ಬಲಗಾಲೆತ್ತಿ, ಪಾದವನ್ನು ಎಡ ತೊಡೆಯ ಮೇಲಿಡಿ. ಎಡಗಾಲಿನ ತೊಡೆಯನ್ನು ಕೈಗಳಲ್ಲಿ ಹಿಡಿದುಕೊಳ್ಳಿ. ಕೆಲ ನಿಮಿಷಗಳವರೆಗೆ ಹಾಗೇ ಇರಿ.

Advertisement

5. ಆಂಜನೇಯಾಸನ 
ಮೊದಲು ಅಂಬಾರಿಯಂತೆ ಕೈಕಾಲುಗಳನ್ನು ನೆಲಕ್ಕೆ ಊರಿ. ಬಲಗಾಲನ್ನು ಕೈಗಳ ನಡುವೆ ತನ್ನಿ. ಎಡಗಾಲನ್ನು ನೆಲದ ಮೇಲೆ ನೇರಕ್ಕೆ ಚಾಚಿ. ಕೆಲ ನಿಮಿಷಗಳ ಬಳಿಕ ಇನ್ನೊಂದು ಕಾಲಿಗೂ ಪುನರಾವರ್ತಿಸಿ.

Advertisement

Udayavani is now on Telegram. Click here to join our channel and stay updated with the latest news.

Next