Advertisement

ಜಂಬೂಸವಾರಿಯಲ್ಲಿ 5 ಹೊಸ ಕಲಾತಂಡಗಳು 

07:23 AM Sep 24, 2017 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಕಲಾತಂಡಗಳ ಜೊತೆಗೆ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ 40 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. 

Advertisement

ದೆಹಲಿಯ ಗಣರಾಜ್ಯೋತ್ಸವ ಪೆರೇಡ್‌ ಮಾದರಿಯಲ್ಲಿ ಈ ವರ್ಷ ಶಿಸ್ತುಬದ್ಧವಾಗಿ ಜಂಬೂಸವಾರಿ ಮೆರವಣಿಗೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇದಕ್ಕಾಗಿ ಒಂದು ತಂಡವನ್ನು ಕಳುಹಿಸಿ ಕೊಡುವಂತೆ ಭಾರತೀಯ ವಾಯುಪಡೆಯನ್ನು ಸಂಪರ್ಕಿಸಲಾಗಿದೆ. ಈಗಾಗಲೇ ಒಮ್ಮೆ ಮೈಸೂರಿಗೆ ಬಂದು ಪರಿಶೀಲನೆ ನಡೆಸಿ ಮಾಹಿತಿ ಪಡೆದು ಹೋಗಿರುವ ವಾಯುಪಡೆ ಅಧಿಕಾರಿಗಳು, ಸೋಮವಾರ ಮತ್ತೂಮ್ಮೆ ಪರಿಶೀಲನೆಗೆ ಬರಲಿದ್ದಾರೆ. ನಂತರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೆರವಣಿಗೆಯಲ್ಲಿ ಈ ಬಾರಿಯೂ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಅರ್ಜುನ ಸಾಗಲಿದ್ದಾನೆ. ಜೊತೆಗೆ, ಕಲಾತಂಡಗಳಲ್ಲಿ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಬುಡಬುಡಿಕೆ ತಂಡ, ಧಾರವಾಡದ ಫ‌ಕೀರರ ಡಪ್ಪು, ಉಡುಪಿಯ ಕೊರಗರ ಡೋಲು, ಉತ್ತರಕನ್ನಡ ಜಿಲ್ಲೆ ಹಳಿಯಾಳದ ಸಿದ್ದಿಯರ ಡಯಾಮಿ ಹಾಗೂ ಶಿವಮೊಗ್ಗದ ಗೊಂಡರಢಕ್ಕೆ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ. ಇವುಗಳ ಜೊತೆ ಎನ್‌ಸಿಸಿ, ಭಾರತ ಸೇವಾದಳ ಹಾಗೂ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. 

ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಸಿಕ್ಕಿಂನ 15, ಪಂಜಾಬ್‌ನ 15, ಪಶ್ಚಿಮ ಬಂಗಾಳದ 15, ಆಂಧ್ರಪ್ರದೇಶದ 15 ಹಾಗೂ ಕೇರಳದ 15 ಕಲಾವಿದರ ತಂಡಗಳು ಭಾಗವಹಿಸುತ್ತಿವೆ. ಚರ್ಮವಾದ್ಯದ ವಿವಿಧ ಪ್ರಕಾರದ 10 ಕಲಾತಂಡಗಳು ಪಾಲ್ಗೊಳ್ಳಲಿವೆ. ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿ ಕಲಾತಂಡಗಳಲ್ಲೂ 40 ಜನರಿಗೆ ಅವಕಾಶ ನೀಡಲಾಗುತ್ತಿದ್ದು, ಇವರಿಗೆ ಮೆರವಣಿಗೆ ಸಮಿತಿಯಿಂದ ರುಮಾಲು ನೀಡಲಾಗುವುದು. ಕಲಾತಂಡಗಳ ಜೊತೆ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ 40 ಸ್ತಬ್ದ ಚಿತ್ರಗಳು ಪಾಲ್ಗೊಳ್ಳಲಿವೆ.

ಪಂಜಿನ ಕವಾಯತು: ಜಂಬೂಸವಾರಿ ಮೆರವಣಿಗೆ ಮುಗಿದ
ನಂತರ ರಾತ್ರಿ 8 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಪರೇಡ್‌ ವೀಕ್ಷಣೆ ಮಾಡಲಿದ್ದಾರೆ. ನಂತರ ಎ.ಎಸ್‌. ಪ್ರಸನ್ನಕುಮಾರ್‌ ತಂಡದಿಂದ ನಾಡಗೀತೆ, ಟಾರ್ನಡೋಸ್‌ ತಂಡದಿಂದ 20 ನಿಮಿಷಗಳ ಕಾಲ ಮೋಟಾರ್‌ ಸೈಕಲ್‌ನಲ್ಲಿ ಸಾಹಸ ಪ್ರದರ್ಶನ, ಮೌಂಟೆಡ್‌ ಪೊಲೀಸ್‌ ತಂಡ 15  ನಿಮಿಷಗಳ ಕಾಲ ಟೆಂಟ್‌ ಪೆಗ್ಗಿಂಗ್‌ ಸಾಹಸ ಪ್ರದರ್ಶಿಸಲಿದೆ. ಮೈನವಿರೇಳಿಸುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ವಿವಿಧ ಸಾಹಸಗಳ ಪ್ರದರ್ಶನ ನೀಡಲು ಚಿತ್ರದುರ್ಗದ ಐಮಂಗಲ ಪೊಲೀಸ್‌ ತರಬೇತಿ ಶಾಲೆಯಲ್ಲಿ ತಾಲೀಮು ನಡೆಸಲಾಗುತ್ತಿದೆ. ಮಿಲಿಟರಿ ಮೋಟಾರ್‌ ಸೈಕಲ್‌ ಸಾಹಸ ಪ್ರದರ್ಶನ ಸಂಬಂಧ ಈ ವರ್ಷ ಟಾರ್ನಡೋಸ್‌ ತಂಡ ಭಾಗವಹಿಸುತ್ತಿದೆ. ಶ್ರೀಧರ್‌ ಜೈನ್‌ ಮತ್ತು ಜನಾರ್ದನ್‌ (ಜನ್ನಿ) ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Advertisement

ದಸರಾ ಪ್ರಯುಕ್ತ 1500 ವಿಶೇಷ ಬಸ್‌ ಸೇವೆ
ಬೆಂಗಳೂರು: ನಾಡಹಬ್ಬ ದಸರಾ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆಯು ಸೆ.28ರಿಂದ ಅ.2ರ ವರೆಗೆ ಸುಮಾರು 1,500 ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಿದೆ. ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವವರಿಗಾಗಿ ಕಲ್ಪಿಸಿರುವ ಈ ಹೆಚ್ಚುವರಿ ಸೇವೆಗಳಲ್ಲಿ ಸಾಮಾನ್ಯ, ವೇಗಧೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌ ಹಾಗೂ ಡೈಮಂಡ್‌ ಕ್ಲಾಸ್‌ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಈ ಬಸ್‌ಗಳು ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಬಸ್‌ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಟಿಟಿಎಂಸಿ ಬಸ್‌ ನಿಲ್ದಾಣದಿಂದ ಸೇವೆ
ಸಲ್ಲಿಸಲಿವೆ. ನಂತರ ರಾಜ್ಯ ಮತ್ತು ಅಂತರ್‌ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.3ರಿಂದ 8ರವರೆಗೂ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ವಿಶೇಷ ಬಸ್‌ಗಳ ಸೇವೆ ಇರಲಿದೆ.

ಎಲ್ಲೆಲ್ಲಿಗೆ ಸೇವೆ?: ಬೆಂಗಳೂರಿನ ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 130 ಹೆಚ್ಚುವರಿ ವಾಹನಗಳು, ಅಲ್ಲದೇ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ಹೈದರಾಬಾದ್‌, ಚೆನ್ನೈ, ಊಟಿ, ಕೊಡೈಕೆನಾಲ್‌, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಮುಂಬೈ, ಎರ್ನಾಕುಲಂ, ಪಾಲ್ಗಾಟ್‌, ತಿರುವನಂತಪುರ ಸೇರಿ ಮತ್ತಿತರ ನೆರೆ ರಾಜ್ಯಗಳ ಸ್ಥಳಗಳಿಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಇ ಟಿಕೆಟ್‌ ಬುಕಿಂಗ್‌ಗೆ //www.ksrtc.in/oprs-web/ ಸಂಪರ್ಕಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದರೆ ಶೇ.5 ಮತ್ತು ಹೋಗುವ-ಬರುವ ಪ್ರಯಾಣದ ಟಿಕೆಟ್‌ ಒಟ್ಟಿಗೆ ಕಾಯ್ದಿರಿಸಿದರೆ, ಬರುವ ಪ್ರಯಾಣ ದರದಲ್ಲಿ ಶೇ.10 ರಿಯಾಯ್ತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next