Advertisement

ಮಳೆಗಾಲದಲ್ಲಿ ನೀವು ನೋಡಲೇ ಬೇಕಾದ 5 ಸ್ಥಳಗಳು

08:03 PM Jun 04, 2020 | Sriram |

ಬಿಸಿಲಿನ ಬೇಗೆಗೆ ಬೆಂದು ಬೆಂಡಾಗಿದ್ದ ಗಿಡಮರ, ಬಳ್ಳಿಗಳೆಲ್ಲ ಹೊಸ ಬದುಕಿನ ಆರಂಭದ ವಿಶ್ವಾಸದಲ್ಲಿ ಚಿಗುರೊಡೆಯುವ ಕಾಲ ಮಳೆಗಾಲ. ಮಳೆಗಾಲ ಬಂತೆಂದರೆ ಸಾಕು ಪ್ರಕೃತಿ ಮಾತೆ ಹೊಸ ಸೀರೆಯುಟ್ಟು ಸಿಂಗಾರಗೊಂಡಂತೆ ನೋಡುಗರ ಕಣ್ಣಿಗೆ ಗೋಚರಿಸುತ್ತಾಳೆ. ಜಿಟಿಜಿಟಿ ಮಳೆಯ ನಡುವೆ ಕಾಡು, ಗುಡ್ಡಗಳ ಜತೆಗೆ ಊರು ಸುತ್ತುವುದೇ ಒಂದು ಖುಷಿ. ಇಂತಹ ಮಳೆಗಾಲದ ಸಂದರ್ಭ ನೋಡಲೇ ಬೇಕಾದ ಕೆಲವು ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಕರ್ನಾಟಕದ ಕೂರ್ಗ್‌
ಮಳೆಗಾಲದಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ಸ್ಥಳಗಳಲ್ಲಿ ಕರ್ನಾಟಕದ ಕೂರ್ಗ್‌ ಅಥವಾ ಕೊಡಗು ಒಂದು. ಸುಂದರವಾದ ಪರ್ವತ ಶ್ರೇಣಿಗಳನ್ನು ಹೊಂದಿರುವ ಸ್ಥಳ ಮಾತ್ರವಾಗಿರದ ಕೂರ್ಗ್‌ ಕಾಫಿ ತೋಟಕ್ಕೂ ಹೆಸರು ವಾಸಿ. ಮಳೆಗಾಲದಲ್ಲಿ ತುಂಬಿ ಉಕ್ಕುವ ಅಬ್ಬಿ ಮತ್ತು ಜೋಗ್‌ ಜಲಪಾತಗಳು ಎಂತವರನ್ನೂ ಮನಸೆಳೆಯದೆ ಇರಲಾರವು. ಮಡಿಕೇರಿ ಕೋಟೆ, ಬೈಲುಕುಪ್ಪೆ ಇವೆಲ್ಲ ಇತರ ಸುಂದರ ಸ್ಥಳಗಳು. ಒಂದೊಮ್ಮೆ ನೀವು ಅದೃಷ್ಟಶಾಲಿಗಳಾಗಿದ್ದರೆ ಕಾಮನಬಿಲ್ಲು ಕೂಡ ನಿಮ್ಮನ್ನು ಸ್ವಾಗತಿಸಬಹುದು.

ಮೆಘಾಲಯದ ಶಿಲ್ಲೊಂಗ್‌


ಮೋಡಗಳಿಂದ ಆವೃತವಾದ ಶಿಲ್ಲೊಂಗ್‌ನ ಪ್ರಾಕೃತಿಕ ಸೌಂದರ್ಯ ಸವಿಯುವುದೆಂದರೆ ಕಣ್ಣುಗಳಿಗೆ ಹಬ್ಬದೂಟವಿದ್ದಂತೆ. ಕಣ್ಣಂಚಿನುದ್ದಕ್ಕೂ ಕಾಣಸಿಗುವ ಹಚ್ಚ ಹಸುರಿನ ಪ್ರದೇಶ, ಧುಮ್ಮಿಕ್ಕುಮ ಜಲಪಾತಗಳಿಂದಲೇ ಹೆಸರುವಾಸಿ ಈ ಪ್ರದೇಶ. ಎಲಿಫೆಂಟ್‌ ಮತ್ತು ಸ್ಪ್ರೆಡ್‌ ಈಗಲ್‌ ಜಲಪಾತಗಳು ನೀವು ಮಳೆಗಾಲದಲ್ಲಿ ನೋಡಲೇ ಬೇಕಾದ ಇಲ್ಲಿನ ಎರಡು ಪ್ರಮುಖ ಸ್ಥಳಗಳು.

ಕೇರಳದ ಮುನ್ನಾರ್‌


ಮುನ್ನಾರ್‌ ಕೇರಳದ ಸ್ವರ್ಗವೆಂದೇ ಪ್ರತೀತಿ. ಟೀ ಉತ್ಪಾದನೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಪ್ರದೇಶದಲ್ಲಿ ಮಳೆಗಾಲದ ಸಂದರ್ಭ ಹುಟ್ಟಿಕೊಳ್ಳುವ ಜಲಪಾತಗಳ ವೀಕ್ಷಣೆಯೇ ಚೆಂದ. ವಿಶೇಷವೆಂದರೆ ಮಳೆಗಾಲದ ಸಂದರ್ಭ ಮುನ್ನಾರ್‌ನಲ್ಲಿ ಜನಸಂದಣಿ ಅಷ್ಟಾಗಿರುವುದಿಲ್ಲ. ಪ್ರವಾಸಿಗರಿಗಾಗಿ ಹೊಟೇಲ್‌ಗ‌ಳೂ ವಿಶೇಷ ರಿಯಾಯಿತಿ ನೀಡುತ್ತವೆ. ಟ್ರಕ್ಕಿಂಗ್‌ ಸೇರಿದಂತೆ ಟೀ ತೋಟಗಳಲ್ಲಿ ಓಡಾಡಿ ಖುಷಿ ಪಡಲೂ ಇಲ್ಲಿ ಅವಕಾಶಗಳಿವೆ.

ತಮಿಳುನಾಡಿನ ಕೊಡೈಕೆನಾಲ್‌


ದೇವರು ಉಡುಗರೆಯಾಗಿ ನೀಡಿರುವ ಅರಣ್ಯ ಸಂಪತ್ತೇ ಕೊಡೈಕೆನಾಲ್‌ನ ಪ್ರಾಕೃತಿಕ ಸೌಂದರ್ಯದ ಗುಟ್ಟು. ಕುರುಂಜಿ ಅಂದಾವರ ದೇಗುಲ, ಪಂಭಾರ್‌ ಜಲಪಾತ, ಪಿಲ್ಲರ್‌ ರಾಕ್ಸ್‌ ಮುಂತಾದವು ನೀವಿಲ್ಲಿ ನೋಡಲೇ ಬೇಕಾದ ಸ್ಥಳಗಳು. ಕೊಡೈಕೆನಾಲ್‌ ಸಾಕಷ್ಟು ಬೆಟ್ಟಗಳಿಂದ ಕುಡಿರುವ ತಮಿಳುನಾಡಿನ ಒಂದು ಚಿಕ್ಕ ಪಟ್ಟಣವಾಗಿದ್ದು, ಮಳೆಗಾಲದ ಪ್ರವಾಸಕ್ಕೆ ಯೋಗ್ಯ ಸ್ಥಳವೂ ಹೌದು.

Advertisement

ಮಹಾಬಲೇಶ್ವರ


ಪಶ್ಚಿಮ ಘಟ್ಟದ ಭಾಗವಾಗಿರುವ ಸಹ್ಯಾದ್ರಿ ಶ್ರೇಣಿಯ ಭಾಗದಲ್ಲಿರುವ ಮಹಾಬಲೇಶ್ವರ ಭಾರತದ ರೊಮ್ಯಾಂಟಿಕ್‌ ಪ್ರದೇಶಗಳಲ್ಲೊಂದು. ಮಂಜಿನಿಂದಾವೃತ ರಸ್ತೆಗಳು, ದಾರಿಯುದ್ದಕ್ಕೂ ಸಿಗುವ ಮಳೆಯಿಂದ ಉಂಟಾದ ಹಳ್ಳಗಳು, ಹಚ್ಚ ಹಸುರಿನ ಪರಿಸರ, ಬೆಟ್ಟಗಳಿಂದ ಇಳಿದುಬರುತ್ತಿವೆಯೋ ಎಂಬಂತೆ ಭಾಸವಾಗುವ ಮೋಡಗಳು ಎಂತವರನ್ನೂ ಮೂಖವಿಸ್ಮಿತರನ್ನಾಗಿಸುತ್ತವೆ. ಲಿಂಗಮಾಲಾ ಜಲಪಾತ, ಎಲಿಫೆಂಟ್‌ ಹೆಡ್‌ ಪಾಯಿಂಟ್‌ ನೀವಿಲ್ಲಿ ನೋಡಲೇ ಬೇಕಾದ ಸ್ಥಳಗಳು.

-ಸ್ಪಂದನಾ ರಶ್ಮಿ, ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next