ಬೆಂಗಳೂರು: ಬಸವನಗುಡಿಯಲ್ಲಿ ಹದಿನೇಳು ವರ್ಷಗಳ ಹಿಂದೆ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ದಂಡುಪಾಳ್ಯ ಗ್ಯಾಂಗ್‌ನ ಐದು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ಅಧೀನ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದು ಕೋರಿ ದಂಡುಪಾಳ್ಯ ಗ್ಯಾಂಗ್‌ನ ವೆಂಕಟೇಶ್, ನಲ್ಲತಿಮ್ಮ, ಮುನಿಕೃಷ್ಣ, ಲಕ್ಷ್ಮಮ್ಮ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸೋಮವಾರ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ನಾ ಅವರಿದ್ದ ವಿಭಾಗೀಯ ಪೀಠ, “ಅರ್ಜಿದಾರರು ಮಹಿಳೆಯನ್ನು ಕೊಲೆಗೈದಿದ್ದಾರೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳ ಕೊರತೆಯಿದೆ’ ಎಂದು ಅಭಿಪ್ರಾಯಪಟ್ಟು ಐವರೂ ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.
ಮೂವರಿಗೆ ಮೂರು ವರ್ಷ ಜೈಲು: ಇದೇ ಪ್ರಕರಣದಲ್ಲಿ ಮಹಿಳೆಯ ಚಿನ್ನಾಭರಣವನ್ನು ಕದ್ದು ಒತ್ತೆಯಿಟ್ಟ ಆರೋಪ (ಐಪಿಸಿ 396) ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ವೆಂಕಟೇಶ್, ನಲ್ಲತಿಮ್ಮ, ಮುನಿಕೃಷ್ಣನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಆರೋಪಿಗಳ ವಿರುದ್ಧ ಇನ್ನಿತರೆ ಅಪರಾಧ ಪ್ರಕರಣಗಳು ಬಾಕಿ ಉಳಿಯದಿದ್ದರೆ ಬಿಡುಗಡೆಗೊಳಿಸಬಹುದು ಎಂದು ಆದೇಶಿಸಿದೆ. ಆದರೆ, ಆರೋಪಿಗಳ ವಿರುದ್ಧ ಹಲವು ಪ್ರಕರಣಗಳ ಮೇಲ್ಮನವಿ ಅರ್ಜಿಗಳು ಬಾಕಿ ಉಳಿದಿರುವುದರಿಂದ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.
ಪ್ರಕರಣ ಏನು?: 2000 ಅಕ್ಟೋಬರ್ 28ರಂದು ಬಸವನಗುಡಿಯ ಮಂಜಮ್ಮ (22) ಎಂಬಾಕೆಯನ್ನು ಕತ್ತುಕೊಯ್ದು ಕೊಲೆಗೈದಿದ್ದ ಐವರೂ ಆರೋಪಿಗಳು ಆಕೆಯ ಬಳಿಯಿದ್ದ ಚಿನ್ನದ ಸರ, ನಾಲ್ಕು ಬಳೆಗಳು ಸೇರಿದಂತೆ ಇನ್ನಿತರೆ ಓಡವೆಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಗೋಪಿನಾಥ್ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಠಾಣೆ ಪೊಲೀಸರು, ದಂಡುಪಾಳ್ಯ ತಂಡದ ಐವರು ಸದಸ್ಯರುನ್ನು ಬಂಧಿಸಿ ಕೊಲೆ ಹಾಗೂ ದರೋಡೆ, ಕಳವು ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ ಐವರಿಗೂ ಮರಣದಂಡನೆ ಶಿಕ್ಷೆ ವಿಧಿಸಿ 2010 ತೀರ್ಪು ನೀಡಿತ್ತು.