ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿರುವ ಕ್ಷೇತ್ರ ವಿಂಗಡಣಾ ಆಯೋಗವನ್ನು ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಐವರ ನಿಯೋಗ ಮಂಗಳವಾರ(ಜುಲೈ 06) ಭೇಟಿಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೆಲಸ ಕಿತ್ತುಕೊಂಡ ಕ್ರೂರಿ ಕೋವಿಡ್: ರಸ್ತೆ ಬದಿ ಮೀನು ಮಾರುತ್ತಿರುವ ನಟ
ವರದಿಗಳ ಪ್ರಕಾರ, ಓಮರ್ ಅಬ್ದುಲ್ಲಾ ನೇತೃತ್ವದ ಪಕ್ಷದಿಂದ ಅಬ್ದುಲ್ ರಹೀಂ, ಮೊಹಮ್ಮದ್ ಶಫಿ, ಮಿಯಾನ್ ಅಲ್ತಾಫ್ ಅಹಮ್ಮದ್, ನಾಸಿರ್ ಅಸ್ಲಾಂ ವಾನಿ ಮತ್ತು ಸಾಕೀನಾ ಇಂದು ಹೋಟೆಲ್ ನಲ್ಲಿ ಕ್ಷೇತ್ರ ವಿಂಗಡಣಾ ಆಯೋಗವನ್ನು ಭೇಟಿಯಾಗಿದೆ ಎಂದು ವರದಿ ಹೇಳಿದೆ.
ಮುಖಂಡರು ಪಕ್ಷವನ್ನು ಪ್ರತಿನಿಧಿಸಲಿದ್ದು, ಅವರು ತಮ್ಮ ಪಕ್ಷಗಳ ದೃಷ್ಟಿಕೋನ ಮತ್ತು ಸಲಹೆಗಳನ್ನು ಆಯೋಗದ ಮುಂದೆ ಇಡಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಕ್ಷೇತ್ರ ವಿಂಗಡಣೆಯ ಪ್ರಕ್ರಿಯೆ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಆಯೋಗವು ಪ್ರತಿಯೊಂದು ಪಕ್ಷಕ್ಕೂ 20 ನಿಮಿಷಗಳನ್ನು ನಿಗದಿಪಡಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ತಿಳಿಸಿದೆ.
ಇಂದು ಸಂಜೆ 5.10ರಿಂದ 5.30ರವರೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸಮಯ ನಿಗದಿಪಡಿಸಿದೆ. ಆದರೆ ಜಮ್ಮು-ಕಾಶ್ಮೀರದ ಕ್ಷೇತ್ರ ವಿಂಗಡಣಾ ಆಯೋಗದ ಸಭೆಗೆ ಪಿಡಿಪಿಯ ಮೆಹಬೂಬಾ ಮುಫ್ತಿ ಗೈರು ಹಾಜರಾಗಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಡೆಸಿದ ಸಭೆಯಲ್ಲಿ ನಿರಾಸೆಯಾಗಿದೆ ಎಂದು ಗುಪ್ಕಾರ್ ಮೈತ್ರಿ ಅಭಿಪ್ರಾಯವ್ಯಕ್ತಪಡಿಸಿದ ನಂತರ ಮುಫ್ತಿ ಈ ನಿರ್ಧಾರ ತಳೆದಿರುವುದಾಗಿ ವರದಿ ವಿವರಿಸಿದೆ.