ಮಧ್ಯಪ್ರದೇಶ : ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬಹುಮಾನವಾಗಿ ಹಣ ಇಲ್ಲವೆ ಟ್ರೋಫಿ ನೀಡುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಾಗಿ ಪೆಟ್ರೋಲ್ ನೀಡಲಾಗಿದೆ.
ಫೆ.28 ರಂದು ರಾಜ್ಯ ಕಾಂಗ್ರೆಸ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಫೈನಲ್ ಪಂದ್ಯ ಸನ್‌ರೈಸರ್ಸ್ ಇಲೆವೆನ್ ಮತ್ತು ಶಾಗಿರ್ ತಾರಿಕ್ ಎಲೆವನ್ ತಂಡಗಳ ನಡುವೆ ನಡೆಯಿತು. ಸನ್‌ರೈಸರ್ಸ್ ಇಲೆವೆನ್ ತಂಡದ ಸಲಾವುದ್ದೀನ್ ಅಬ್ಬಾಸಿ ಆಲ್ ರೌಂಡರ್ ಪ್ರದರ್ಶನ ನೀಡಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಸ್ಥಾನ ಪಡೆದುಕೊಂಡ. ಈತನಿಗೆ ಕಾಂಗ್ರೆಸ್ ಮುಖಂಡ ಮನೋಜ್ ಶುಕ್ಲಾ 5 ಲೀಟರ್ ಪೆಟ್ರೋಲ್ ತುಂಬಿದ ಕ್ಯಾನ್ ನೀಡಿ ಗಮನ ಸೆಳೆದರು.
ಬಹುಮಾನವಾಗಿ ಪೆಟ್ರೋಲ್ ನೀಡಿದ್ದೇಕೆ ?
ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಇಂಧನ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸುತ್ತ ಬಂದಿದೆ. ಇದೀಗ ಕ್ರಿಕೆಟ್ ಪಂದ್ಯಾವಳಿಯನ್ನು ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯ ವೇದಿಕೆಯಾಗಿ ಕಾಂಗ್ರೆಸ್ ಬಳಸಿಕೊಂಡಿದೆ. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಾಗಿ ಸಲಾವುದ್ದೀನ್ ಗೆ 5 ಲೀಟರ್ ಪೆಟ್ರೋಲ್ ನೀಡುವ ಮೂಲಕ ಬೆಲೆ ಏರಿಕೆ ಖಂಡಿಸಿದೆ.
ಬಹುಮಾನವಾಗಿ ಪೆಟ್ರೋಲ್ ಪಡೆದ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ. ಕಾಂಗ್ರೆಸ್ ವಿನೂತನ ಪ್ರತಿಭಟನೆ ಎಲ್ಲೆಡೆ ಗಮನ ಸೆಳೆಯುತ್ತಿದೆ.