ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂವ್‌ನಲ್ಲಿ ಶನಿವಾರ ನಡೆದ ಭಾರಿ ಎನ್‌ಕೌಂಟರ್‌ನಲ್ಲಿ ಲಷ್ಕರ್ ಎ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಐವರು ಉಗ್ರರನ್ನು ಹತ್ಯೆಗೈಯಲಾಗಿದೆ.
ಈ ಪೈಕಿ ಕಳೆದ ವರ್ಷ ನಗದು ಹೊತ್ತೂಯ್ಯುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ ಐವರು ಪೊಲೀಸರು ಹಾಗೂ ಇಬ್ಬರು ಗಾರ್ಡ್‌ಗಳನ್ನು ಹತ್ಯೆಗೈದ ಓರ್ವ ಉಗ್ರನೂ ಸೇರಿದ್ದಾನೆ. ಎನ್‌ಕೌಂಟರ್ ವೇಳೆ ನಾಗರಿಕರು ಪ್ರತಿಭಟನೆ ನಡೆಸಿ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ನಡೆದ ಗಲಭೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಶುಕ್ರವಾರ ರಾತ್ರಿ ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿರುವ ಖಾಜಿಗುಂಡ್‌ನಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದವು. ಮೊದಲು ನಾಗರಿಕರನ್ನು ಈ ಪ್ರದೇಶದಿಂದ ಹೊರಕ್ಕೆ ಕಳುಹಿಸಿ, ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಲಾಯಿತು. ಮೃತ ಉಗ್ರರನ್ನು ಗುಲ್ಜಾರ್ ಅಹಮದ್ ಪದ್ದರ್, ಫೈಸಲ್ ಅಹಮದ್ ರಾಥರ್, ಜಹಿದ್ ಅಹ್ಮದ್ ಮಿರ್, ಮಸೂÅರ್ ಮೌಲ್ವಿ ಮತ್ತು ಝಹೂರ್ ಅಹಮದ್ ಲೋನ್ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ಅನಂತ್‌ನಾಗ್‌ನಲ್ಲಿ ಹತ್ಯೆಗೈಯಲ್ಪಟ್ಟ ಹಿಜ್ಬುಲ್‌ನ ಕಮಾಂಡರ್ ಅಲ್ತಾಫ್ ಕಚೂÅಗೆ ಪದ್ದಾರ್ ಅತ್ಯಂತ ಆಪ್ತನಾಗಿದ್ದ. ಕಳೆದ ವರ್ಷ ಬ್ಯಾಂಕ್ ನಗದು ವ್ಯಾನ್ ಮೇಲೆ ನಡೆಸಿದ ದಾಳಿಯ ರೂವಾರಿ ಈ ಪದ್ದಾರ್ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ.
ಕಲ್ಲುತೂರಾಟ: ಎನ್‌ಕೌಂಟರ್‌ನ ಕೊನೆಯ ಹಂತದಲ್ಲಿ ಸ್ಥಳೀಯ ಯುವಕರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇವರನ್ನು ಚದುರಿಸಲು ಭದ್ರತಾ ಪಡೆಗಳು ಶೆಲ್‌ಗಳು, ಪೆಲೆಟ್‌ಗಳನ್ನು ಬಳಸಿವೆ. ಅಷ್ಟೇ ಅಲ್ಲ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬಾರಾಮುಲ್ಲಾ ಮತ್ತು ಖಾಜಿಗುಂಡ್‌ನಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ಅನಂತ್‌ನಾಗ್ ಹಾಗೂ ಕುಲ್ಗಾಂವ್‌ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.