– ಕೇಂದ್ರ ಸರಕಾರಕ್ಕೆ ಉನ್ನತ ಸಮಿತಿಯೊಂದರಿಂದ ಶಿಫಾರಸು ಸಾಧ್ಯತೆ
ಹೊಸದಿಲ್ಲಿ: ತೆರಿಗೆ ಹೊರೆ ಬಗ್ಗೆ ಜನರು ಮಾತನಾಡುತ್ತಿರುವಾಗಲೇ, ವೈಯಕ್ತಿಕ ತೆರಿಗೆಯನ್ನು ಇಳಿಸಲು ಉನ್ನತ ಸಮಿತಿಯೊಂದು ಸರಕಾರಕ್ಕೆ ಶಿಫಾರಸು ಮಾಡುವ ಸಿದ್ಧತೆಯಲ್ಲಿದೆ. ಈ ಮೂಲಕ ಮಧ್ಯಮ ವರ್ಗದ ಕೈಯಲ್ಲಿ ಇನ್ನಷ್ಟು ಕಾಸು ಇರುವಂತೆ ಮಾಡಿ, ವಹಿವಾಟು ಹೆಚ್ಚಳದ ಗುರಿ ಹೊಂದಲಾಗಿದೆ.
ಸಮಿತಿ ಪ್ರಕಾರ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಶೇ.10ರಷ್ಟು ತೆರಿಗೆ ಪಾವತಿ ಮಾಡಬೇಕು ಮತ್ತು 10ರಿಂದ 20 ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಶೇ.20ರಷ್ಟು ತೆರಿಗೆ ಪಾವತಿ ಮಾಡುವಂತೆ ಮಾಡಬೇಕು ಎಂದು ಅದು ಹೇಳಿದೆ.
ಸದ್ಯ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. (2019ರ ಬಜೆಟ್ ಪ್ರಕಾರ, 5 ಲಕ್ಷ ರೂ.ವರೆಗಿನ ಆದಾಯ ಹೊಂದಿದವರಿಗೆ ಆದಾಯ ತೆರಿಗೆ ವಿನಾಯಿತಿ ಇರಲಿದೆ.) 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತಿದೆ. 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಮೂಲಗಳ ಪ್ರಕಾರ, ಐದು ಹಂತದ ತೆರಿಗೆ ಸ್ಲಾéಬ್‌ಗಳನ್ನು ಸಮಿತಿ ಶಿಫಾರಸು ಮಾಡಿದೆ. ಇದರಲ್ಲಿ ಶೇ.5, ಶೇ.10, ಶೇ.20 ಮತ್ತು ಶೇ.30 ಮತ್ತು ಶೇ.35ರಷ್ಟು ಎಂಬುದಾಗಿ ಇರಲಿದೆ. ಅಂದರೆ, 20 ಲಕ್ಷ ರೂ.ಗಳಿಂದ 2 ಕೋಟಿ ರೂ.ವರೆಗೆ ಆದಾಯ ಹೊಂದಿವರಿಗೆ ಶೇ.30ರಷ್ಟು ತೆರಿಗೆ ಇರಲಿದ್ದು, 2 ಕೋಟಿ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.35ರಷ್ಟು ತೆರಿಗೆ ಇರಲಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ ಸದಸ್ಯ ಅಖೀಲೇಶ್ ರಂಜನ್ ಅವರ ನೇತೃತ್ವದ ಸಮಿತಿ ಈ ಸಮಿತಿ ವರದಿ ತಯಾರು ಮಾಡಿದ್ದು, ಶಿಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಇನ್ನಷ್ಟೇ ಸಲ್ಲಿಸಬೇಕಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಯಾರಿಗೆ ಎಷ್ಟು ತೆರಿಗೆ?
0.25 ಲಕ್ಷ ರೂ. – ತೆರಿಗೆ ಇಲ್ಲ
5 ಲಕ್ಷ ರೂ.ವರೆಗೆ – ತೆರಿಗೆ ವಿನಾಯ್ತಿ
10 ಲಕ್ಷ ರೂ.ವರೆಗೆ – ಶೇ.10
10-20 ಲಕ್ಷ ರೂ.- ಶೇ.20
20 ಲಕ್ಷ – 2 ಕೋಟಿ ರೂ. – ಶೇ.30
2 ಕೋಟಿ ರೂ. ಗಳಿಗೂ ಹೆಚ್ಚು – ಶೇ.35