Advertisement

ನೆರೆ ಸಂತ್ರಸ್ತರಿಗೆ ಕುಷ್ಟಗಿಯಿಂದ 5 ಲಕ್ಷ ರೊಟ್ಟಿ

01:05 PM Aug 11, 2019 | Team Udayavani |

ಕುಷ್ಟಗಿ: ನೆರೆ ಪೀಡಿತ ಉಕ ಪ್ರದೇಶಕ್ಕೆ ತಕ್ಷಣದ ನೆರವಿನ ಹಿನ್ನೆಲೆಯಲ್ಲಿ 5 ಲಕ್ಷ ರೊಟ್ಟಿ, 2.5 ಕ್ವಿಂಟಲ್ ಶೇಂಗಾ, ಕಡಲೆ ಪುಡಿ ಸೇರಿದಂತೆ ಔಷಧ, ಬಟ್ಟೆ, ಅಗತ್ಯ ಸಾಮಾಗ್ರಿಗಳನ್ನು ತಾಲೂಕು ವತಿಯಿಂದ ಕಳುಹಿಸಿಕೊಡಲು ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ್‌ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಉ-ಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವವರ ನೆರೆವಿಗೆ ಮುಂದಾಗಲು ಸಂಘ ಸಂಸ್ಥೆ ಹಾಗೂ ವರ್ತಕರ ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಸಭೆಯಲ್ಲಿ ಕುಷ್ಟಗಿ ತಾಲೂಕಿನಿಂದ 5 ಲಕ್ಷ ರೊಟ್ಟಿಗಳನ್ನು ಗ್ರಾಮಸ್ಥರಿಂದ ತಯಾರಿಸಲು ಆಯಾ ಹೋಬಳಿ ನಾಡ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಈ ದಿನ ಸಂಜೆ ಆಯಾ ಗ್ರಾಮಗಳಲ್ಲಿ ಡಂಗುರ ಸಾರಲು ಗ್ರಾಮ ಸಹಾಯಕರಿಗೆ ತಿಳಿಸಲಾಗಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ರೊಟ್ಟಿ ಸ್ವೀಕಾರ ಕೇಂದ್ರ ರವಿವಾರದಿಂದ ಆರಂಭಿಸುತ್ತಿರುವುದಾಗಿ ತಿಳಿಸಿದರು. ರೊಟ್ಟಿ ಮಾಡಿಕೊಡಲು ಸ್ವ ಸಹಾಯ ಗುಂಪು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸ್ತ್ರೀ ಶಕ್ತಿ ಗುಂಪುಗಳಿಗೆ, ರೊಟ್ಟಿ ತಯಾರಿಸುವವರಿಗೆ ರೊಟ್ಟಿ ಮಾಡಿಕೊಡಲು ಹೇಳಿರುವುದಾಗಿ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಮಾತನಾಡಿ, ತಾಲೂಕಿನಲ್ಲಿ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 25 ವಸತಿ ನಿಲಯಗಳಿವೆ. ಇವೆರಡೂ ಸೇರಿ ಎರಡೂವರೆ ಕ್ವಿಂಟಲ್ ಶೇಂಗಾ, ಕಡಲೆ ಪುಡಿ ಮಾಡಿಸಿ ಕೊಡುವ ಜವಾಬ್ದಾರಿವಹಿಸಿಕೊಂಡರು. ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ್‌ ಅವರು ರೊಟ್ಟಿ ಹಾಗೂ ಶೇಂಗಾ, ಕಡಲೆ ಪುಡಿಯನ್ನು ವಾರದವರೆಗೂ ಇಡಬಹುದು. ಹೀಗಾಗಿ ತಕ್ಷಣವೇ ಕಳುಹಿಸಿಕೊಡುವ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದು, ಸೋಮವಾರದ ವೇಳೆಗೆ‌ ವಾಹನಲ್ಲಿ ರೊಟ್ಟಿ, ಶೇಂಗಾ, ಕಡಲೆ ಸೇರಿದಂತೆ ಸಂಗ್ರಹವಾಗಿರುವ ಬಟ್ಟೆ, ಬ್ಲಾಂಕೆಟ್, ಔಷಧಿಗಳನ್ನು ಕಳುಹಿಸಲಾಗುವುದು. ಈ ಲಾರಿಯಲ್ಲಿ ಕುಷ್ಟಗಿಯ 25 ಸ್ವಯಂ ಪ್ರೇರಿತ ಸ್ವಯಂ ಸೇವಕರನ್ನು ಕಳುಹಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಗುರುತಿನ ಚೀಟೆ ನೀಡಲು ಯೋಜಿಸಲಾಗಿದೆ ಎಂದರು.

ತಾಲೂಕಿನ ಮಠಗಳಿಗೆ ಮಾದಲಿ ತಯಾರಿಸಿ ಕೊಡಲು ಕೇಳಿಕೊಳ್ಳುವುದಾಗಿ ತಿಳಿಸಿದ ಅವರು, ಸ್ಥಳೀಯ ಔಷಧ ಅಂಗಡಿಯವರು ಅಗತ್ಯ ಔಷಧಿ, ಮಾತ್ರೆ, ಸ್ಥಳೀಯ ಕಿರಾಣಿ ವರ್ತಕರು, ಅಕ್ಕಿ, ಬೇಳೆ, ಬೆಲ್ಲ, ರವೆ, ಗೋಧಿ ಹಿಟ್ಟು ಇತರೇ ದಿನಸಿ ಸಂಗ್ರಹಿಸಿಕೊಡುವುದಾಗಿ ತಿಳಿಸಿರುವುದಾಗಿ ಹೇಳಿದರು. ಪ್ರಾಚಾರ್ಯ ಟಿ. ಬಸವರಾಜ್‌, ತಾಜುದ್ದೀನ್‌ ದಳಪತಿ, ಕರವೇ ಜಿಲ್ಲಾಧ್ಯಕ್ಷರಾದ ಬಸನಗೌಡ ಪೊಲೀಸಪಾಟೀಲ, ಅಜ್ಜಪ್ಪ ಕರಡಕಲ್, ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಮಂಜು ನಾಲಗಾರ, ನಬಿಸಾಬ್‌ ದೋಟಿಹಾಳ, ಭರತರಾಜ್‌ ತುರಕಾಣಿ, ಕಿರಣ ತುರಕಾಣಿ, ವರ್ತಕರ ಸಂಘದ ರಹೀಮಸಾಬ್‌ ಮುಲ್ಲಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next