Advertisement

ವಿದರ್ಭದಿಂದ ಕರುನಾಡಿಗೆ ಗಾರ್ದಭ ಗುಳೆ; 6 ತಿಂಗಳಿಗೆ 5 ಲಕ್ಷ ರೂ. ದುಡಿಯುವ ತಂಡ

11:25 PM Mar 26, 2023 | Team Udayavani |

ಧಾರವಾಡ: “ಥೂ ಕತ್ತೆ ನಿನಗೇನು ಗೊತ್ತು? ಕತ್ತೆ ಕಾಯೋಕೆ ಹೋಗು. ಕತ್ತೆ ಊರ ಕತ್ತೆ’ ಹೀಗೆ ಕತ್ತೆಯನ್ನು ಹೀಗಳೆಯುವುದು ಜನಮಾನಸದ ರೂಢಿ. ಆದರೆ ಅದೇ ಕತ್ತೆಯ ಒಂದು ಚಮಚ ಹಾಲಿಗೆ 200 ರೂ. ಇನ್ನು ಕತ್ತೆ ಇಲ್ಲದೆ ಇಟ್ಟಿಗೆ ಭಟ್ಟಿಗಳನ್ನು ಒಟ್ಟುವುದು ಕಷ್ಟವೇ ಆಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕತ್ತೆಗಳಿಲ್ಲದಿದ್ದರೂ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಿಂದ ಸಾವಿರ ಸಾವಿರ ಗಾರ್ದಭಗಳು ಉತ್ತರ ಕರ್ನಾಟಕದತ್ತ ಹೆಜ್ಜೆ ಹಾಕುತ್ತಿವೆ.

Advertisement

ಹೌದು, ಕತ್ತೆ ದುಡಿದಂತೆ ದುಡಿಯುವ ಇಟ್ಟಿಗೆ ಭಟ್ಟಿಗಳಲ್ಲಿನ ಕಾರ್ಮಿಕರಿಗೆ ನಿಜಕ್ಕೂ ಇದೀಗ ಕತ್ತೆಗಳೇ ಸಾತ್‌ ಕೊಡುತ್ತಿವೆ. ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿನ ಇಟ್ಟಿಗೆ ಭಟ್ಟಿಗಳಲ್ಲಿ ಇಟ್ಟಿಗೆಯನ್ನು ಸಿದ್ಧಗೊಳಿಸಿದ ಸ್ಥಳದಿಂದ ಭಟ್ಟಿ ಇಳಿಸುವ ಜಾಗದ ವರೆಗೆ ಹೊತ್ತೂಯ್ಯಲು ಸಾವಿರಾರು ಗಾರ್ದಭಗಳು ವಿದರ್ಭದಿಂದ ಗುಳೆ ಬಂದಿವೆ.

ಪ್ರತಿವರ್ಷ ದೀಪಾವಳಿ ನಂತರ ವಿದರ್ಭ ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿರುವ ಕತ್ತೆಗಳನ್ನು ಗುತ್ತಿಗೆ ಆಧಾರದ ಮೇಲೆ ಮತ್ತು ಸ್ವತಃ ದುಡಿಸುವ ಮಾಲೀಕರು ತಂಡೋಪತಂಡವಾಗಿ ಕರ್ನಾಟಕದ ಉತ್ತರದ ಜಿಲ್ಲೆಗಳಿಗೆ ಲಗ್ಗೆ ಹಾಕುತ್ತಿದ್ದಾರೆ. ಇಲ್ಲಿನ ಇಟ್ಟಿಗೆ ಭಟ್ಟಿ, ಕಲ್ಲಿನ ಕ್ವಾರಿ, ಟಿಂಬರ್‌ಯಾರ್ಡ್‌ಗಳು, ಕಿರು ಗ್ರಾನೈಟ್‌ ಕ್ವಾರಿಗಳಲ್ಲಿ ಸಾಗಾಣಿಕೆಗೆ ಅತ್ಯಂತ ಅನುಕೂಲವಾಗಿರುವ ಕತ್ತೆಗಳ ಹಿಂಡನ್ನು ಬಳಕೆ ಮಾಡುತ್ತಾರೆ.

ಕೂಲಿ ಎಷ್ಟು?:
ಕತ್ತೆಗಳ ದುಡಿತಕ್ಕೆ ಉತ್ತಮ ಕೂಲಿ ಸಿಗುತ್ತಿದೆ. ಒಂದೊಂದು ಇಟ್ಟಿಗೆ ಭಟ್ಟಿಯಲ್ಲಿ ಕನಿಷ್ಠ 15ರಿಂದ 20 ಕತ್ತೆಗಳು ಕೆಲಸ ಮಾಡುತ್ತಿವೆ. ಇವುಗಳ ಜೊತೆಗೆ ಇಬ್ಬರು ಕತ್ತೆ ಮಾಲೀಕರು ಇರಲಿದ್ದಾರೆ. ಪ್ರತಿವರ್ಷದ ದೀಪಾವಳಿ ವೇಳೆ ಧಾರವಾಡ ಸೇರಿ ಸುತ್ತಲಿನ ಜಿಲ್ಲೆಗಳಿಗೆ ಆಗಮಿಸುವ ಗಾರ್ದಭ ಗ್ಯಾಂಗ್ಸ್‌ ಯುಗಾದಿ ವರೆಗೂ ಭರಪೂರ ದುಡಿತದಲ್ಲಿರುತ್ತವೆ.
ಇದನ್ನು ಇಟ್ಟಿಗೆ ಭಟ್ಟಿಯ ಸೀಜನ್‌ ಎಂದು ಕರೆಯಲಾಗುತ್ತದೆ. ಈ ವೇಳೆ ಇಟ್ಟಿಗೆ ನಿರ್ಮಾಣ ಜೋರಾಗಿ ನಡೆಯುತ್ತಿರುತ್ತದೆ. ಮುಂಗಾರು ಪೂರ್ವ ಮಳೆಗಳು ಸುರಿಯುವ ಮುನ್ನವೇ ಇಟ್ಟಿಗೆಗಳನ್ನು ಒಟ್ಟಿ ಹಾಕಿ ಭಟ್ಟಿ ಇಳಿಸಲಾಗುತ್ತದೆ. ಹೀಗಾಗಿ ಈ ಆರು ತಿಂಗಳಲ್ಲಿ ಒಂದೊಂದು ಕತ್ತೆ ತಂಡಗಳು ಕನಿಷ್ಟ 5-6 ಲಕ್ಷ ರೂ. ದುಡಿತ ಮಾಡುತ್ತವೆ. ಧಾರವಾಡ, ಅಳ್ನಾವರ, ಕಲಘಟಗಿ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ, ಹಾವೇರಿ ಜಿಲ್ಲೆಯ ಹಾನಗಲ್‌, ಶಿಗ್ಗಾವಿ, ಬೆಳಗಾವಿ ಜಿಲ್ಲೆಯ ಖಾನಾಪೂರ, ಕಿತ್ತೂರು ಮತ್ತು ಬೈಲಹೊಂಗಲ ಸುತ್ತಮುತ್ತ ಇಟ್ಟಿಗೆ ಭಟ್ಟಿಗಳಲ್ಲಿ ಕತ್ತೆಗಳ ದರ್ಬಾರು ಜೋರಾಗಿದೆ.

ಕತ್ತೆಯ ಹಾಲು ಬೋನಸ್‌:
ಇನ್ನು ಕತ್ತೆಯ ಹಾಲು ಮಕ್ಕಳ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠ ಎನ್ನುವ ಪರಿಕಲ್ಪನೆಯೂ ಇದೆ. ಹೊಟ್ಟೆ ನೋವಿನಿಂದ ಬಳಲುವ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಅತೀ ಉತ್ತಮ ಎನ್ನುವ ನಂಬಿಕೆ ಇದ್ದು, ಒಂದು ಸಣ್ಣ ಚಮಚ ಹಾಲಿಗೆ 150-200 ರೂ.ಗೆ ಮಾರಾಟವಾಗುತ್ತಿವೆ.

Advertisement

ಕತ್ತೆ ಹಾಲಿನ ಪೋಷಕಾಂಶಗಳ ಕುರಿತು ಗ್ರಾಮೀಣ ಭಾಗದ ಜನರಲ್ಲಿ ವಿಭಿನ್ನ ನಂಬಿಕೆಗಳಿದ್ದು, ಮಕ್ಕಳಿಲ್ಲದ ದಂಪತಿ ಕೂಡ ಅನೇಕ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಕತ್ತೆ ಹಾಲಿನಲ್ಲಿ ವನಸ್ಪತಿ ಬೆರೆಸಿ ಕುಡಿಯುವ ಪದ್ಧತಿ ಇದೆ. ಹೀಗಾಗಿ ಕತ್ತೆ ಮಾಲೀಕರು ಇಟ್ಟಿಗೆ ಭಟ್ಟಿ ಜೊತೆಗೆ ಕತ್ತೆ ಹಾಲಿನ ಮಾರಾಟ ಮಾಡಿ ಹಣ ಮಾಡುತ್ತಾರೆ. ಕೆಲವರು ಉಚಿತವಾಗಿಯೂ ಕೊಡುತ್ತಾರೆ.

ತೆಲಂಗಾಣ ಭಾಗದಲ್ಲಿ ಕತ್ತೆ ಮಾಂಸ ಆರೋಗ್ಯಕ್ಕೆ ಉತ್ತಮ ಎಂಬ ಸುದ್ದಿ ಹರಿದಾಡಿ, ದಾಬಾಗಳು, ಹೋಟೆಲ್‌ಗ‌ಳಲ್ಲಿ ಕತ್ತೆ ಮಾಂಸಕ್ಕೆ ಭಾರಿ ಬೇಡಿಕೆ ಉಂಟಾಗಿ ಕತ್ತೆಗಳ ಸಂಖ್ಯೆ ತೀವ್ರ ಕುಸಿತ ಕಂಡಿತ್ತು. ಆದರೆ ಕರ್ನಾಟಕದಲ್ಲಿ ಕತ್ತೆಗಳ ಮಾರಾಟವೂ ಜೋರಾಗಿದ್ದು, ಪ್ರತಿ ಕತ್ತೆಯ ಬೆಲೆ 30-40 ಸಾವಿರ ರೂ. ವರೆಗೂ ಇದೆ. ಇಲ್ಲಿಗೆ ಗುಳೆ ಬಂದಾಗಲೇ ಕತ್ತೆಗಳನ್ನು ಮಾರಾಟ ಮಾಡಿ ಅದರಿಂದಲೂ ಹಣ ಮಾಡುತ್ತಿದ್ದಾರೆ ಗಾದರ್ಭ ಗ್ಯಾಂಗ್ಸ್‌ ಮಾಲೀಕರು.

5 ಸಾವಿರ ಕತ್ತೆಗಳೊಂದಿಗೆ ಆಗಮನ
ಉದ್ಯೋಗ ಅರಸಿಕೊಂಡು ಉತ್ತರ ಕರ್ನಾಟಕ ಭಾಗದ ಜನರು ಬೆಂಗಳೂರು, ಪುಣೆ, ಮುಂಬೈ ಮತ್ತು ಗೋವಾದತ್ತ ಗುಳೆ ಹೋಗುವುದು ಹಳೆಯ ವಿಷಯ. ಇದೀಗ ಉದ್ಯೋಗ ಅರಸಿಕೊಂಡು ಕತ್ತೆಗಳ ಮಾಲೀಕರು ಕತ್ತೆ ಸಮೇತ ಕರುನಾಡಿನತ್ತ ಧಾವಿಸುತ್ತಿದ್ದಾರೆ. ಕೊರೊನಾದಿಂದಾಗಿ ನಡುವೆ ಎರಡು ವರ್ಷ ಬಂದಿರಲಿಲ್ಲ. 2022-23 ರಲ್ಲಿ 5 ಸಾವಿರದಷ್ಟು ಕತ್ತೆಗಳೊಂದಿಗೆ ವಿದರ್ಭದಿಂದ ವಿವಿಧ ಕಡೆ ದುಡಿಯಲು ಬಂದಿದ್ದೇವೆ ಎನ್ನುತ್ತಿದ್ದಾರೆ ಗಾರ್ದಭ ಗ್ಯಾಂಗ್ಸ್‌ ಮಾಲೀಕರು.

ಕತ್ತೆಗಳನ್ನು ದುಡಿಸುವುದು ನಮ್ಮ ಕುಲಕಸುಬು. ಇವುಗಳನ್ನು ನಾವು ಸಾಕುತ್ತೇವೆ. ಪ್ರತಿವರ್ಷ ಆರು ತಿಂಗಳು ಕರ್ನಾಟಕದಲ್ಲಿ ಇರುತ್ತೇವೆ. ಕನ್ನಡಿಗರು ತುಂಬಾ ಒಳ್ಳೆಯವರು.
-ಬಾಳುಮಾಮಾ ಕೇತಕರ್‌, ವಿದರ್ಭ ಕತ್ತೆ ಗ್ಯಾಂಗ್‌ ಮಾಲೀಕ

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next