ಬೆಂಗಳೂರು: ಮುಂದಿನ ಮಾರ್ಚ್ ಒಳಗೆ ಹೊಸದಾಗಿ ಐದು ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ವಸತಿ ಇಲಾಖೆ ಸಭೆಯಲ್ಲಿ ಬಡ ಕುಟುಂಬಗಳಿಗೆ ಹೊಸದಾಗಿ 5 ಲಕ್ಷ ಮನೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಸೋಮವಾರ ಸುದ್ದಿಗಾರರಿಗೆ ಅವರು ತಿಳಿಸಿದರು.
ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ಅಗತ್ಯವಿದೆ. ನೆರವು ಕಲ್ಪಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದರು.
ಇದುವರೆಗೆ 3.5 ಲಕ್ಷ ಮನೆ ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಹಿಂದಿನ ಸರಕಾರವಿದ್ದಾಗ 3.5 ಲಕ್ಷ ಮನೆಗಳ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಿದ್ದರು. ಆದರೆ ಹಣಕಾಸು ಮೀಸಲಿಟ್ಟಿರಲಿಲ್ಲ. ಈಗ ಆ ಮನೆಗಳಿಗೂ ಹಣ ಮಂಜೂರು ಮಾಡಲಾಗಿದೆ ಎಂದರು.
Related Articles
ವಸತಿ ಇಲಾಖೆಗೆ ಅನುದಾನದ ಕೊರತೆ ಇಲ್ಲ. 1,200ರಿಂದ 1,500 ಕೋಟಿ ರೂ. ಖಾತೆಯಲ್ಲಿದೆ. ನಮ್ಮ ಅವಧಿಯಲ್ಲಿ ಕನಿಷ್ಠ 9 ಲಕ್ಷ ಮನೆ ನಿರ್ಮಿಸಿ ಹಂಚಿಕೆ ಮಾಡಲಿದ್ದೇವೆ ಎಂದು ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಮುಂದಿನ ಫೆಬ್ರವರಿಯಲ್ಲಿ ಉದ್ಘಾಟನೆಯಾಗಲಿದೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಧರ್ಮಸ್ಥಳದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣಕ್ಕೆ 200 ಎಕರೆ ಪೈಕಿ 170 ಎಕರೆ ಲಭ್ಯವಿದ್ದು, 30 ಎಕರೆ ಗುರುತಿಸಲು ಸೂಚಿಸಲಾಗಿದೆ. ವಿಜಯಪುರ, ಕಲಬುರಗಿ ವಿಮಾನ ನಿಲ್ದಾಣಗಳ ಕಾರ್ಯವೂ ಚುರುಕುಗೊಂಡಿದೆ. ದಾವಣಗೆರೆಯಲ್ಲೂ ವಿಮಾನ ನಿಲ್ದಾಣದ ಬೇಡಿಕೆಯಿದೆ.
– ವಿ. ಸೋಮಣ್ಣ, ಸಚಿವ