Advertisement

ಐದು ಪಿಂಕ್‌ ಬೇಬಿಗಳಿಗೆ 5 ಲಕ್ಷ ರೂ. ಬಾಂಡ್‌

06:43 AM Jan 02, 2019 | Team Udayavani |

ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳ ಶಿಕ್ಷಣ ಪ್ರೋತ್ಸಾಹಿಸುವ ಉದ್ದೇಶದಿಂದ ಬಿಬಿಎಂಪಿ ಆರಂಭಿಸಿರುವ “ಪಿಂಕ್‌ ಬೇಬಿ’ ಯೋಜನೆಯಲ್ಲಿ ಹೊಸ ವರ್ಷ ಪಾಲಿಕೆ ಆಸ್ಪತ್ರೆಗಳಲ್ಲಿ ಜನಿಸಿದ ಐದು ಹೆಣ್ಣು ಮಕ್ಕಳು ಫ‌ಲನುಭವಿಗಳಾಗಿದ್ದು, ಅವರ ಶಿಕ್ಷಣಕ್ಕಾಗಿ ಪಾಲಿಕೆ ತಲಾ 5 ಲಕ್ಷ ರೂ. ಠೇವಣಿ ಇಡಲಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಜನವರಿ 1 ರಂದು ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿನ ಶಿಕ್ಷಣಕ್ಕೆ ಪಿಂಕ್‌ ಯೋಜನೆಯಡಿ 5 ಲಕ್ಷ ರೂ. ವ್ಯಯಿಸಲು ಪಾಲಿಕೆ ಮುಂದಾಗಿ ಈ ಯೋಜನೆ ರೂಪಿಸಿ ಅದಕ್ಕಾಗಿ ಕಳೆದ ಬಜೆಟ್‌ನಲ್ಲಿ 1.20 ಕೋಟಿ ರೂ. ಮೀಸಲಿಟ್ಟಿತ್ತು.
ನಗರದ ತಾವರೆಕೆರೆ, ಗಂಗಾನಗರ, ರಾಜಾಜಿನಗರ, ನಂದಿನಿ ಲೇಔಟ್‌

ಹಾಗೂ ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆಗಳಲ್ಲಿ ಮಂಗಳವಾರ ಒಟ್ಟು ಐದು ಹೆಣ್ಣು ಮಕ್ಕಳು ಜನಿಸಿವೆ. ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಹೆಣ್ಣು ಶಿಶುಗಳು ಸಹಜವಾಗಿ ಹುಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಪಿಂಕ್‌ ಬೇಬಿ ಯೋಜನೆಗೆ ಅರ್ಹ ಶಿಶುಗಳು ಎಂದು ಗುರುತಿಸಿ ಪೋಷಕರ ಮಾಹಿತಿ ಹಾಗೂ ದಾಖಲೆಗಳನ್ನು ಪಡೆದು ಶುಭಾಶಯ ತಿಳಿಸಿಬಂದಿದ್ದಾರೆ.

ತಾವರೆಕೆರೆ ಹೆರಿಗೆ ಆಸ್ಪತ್ರೆಯಲ್ಲಿ ಮಧ್ಯರಾತ್ರಿ 12.50ಕ್ಕೆ ತಾಯಿ ಲಕ್ಷ್ಮೀ ಬುದ ಮತ್ತು ಆಕಾಶ್‌ ಬುದ ದಂಪತಿಗಳಿಗೆ ಹುಟ್ಟಿದ ಹೆಣ್ಣು ಮಗು “ಪಿಂಕ್‌ ಬೇಬಿ’ ಯೋಜನೆಗೆ ಅರ್ಹವಾದ ಮೊದಲ ಹೆಣ್ಣು ಮಗು. ಆ ಬಳಿಕ ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಉದಯಕುಮಾರ್‌ ಮತ್ತು ಆಶಾ ದಂಪತಿಗಳಿಗೆ ಮಧ್ಯರಾತ್ರಿ 1.12 ನಿಮಿಷಕ್ಕೆ, ರಾಜಾಜಿನಗರ ಹೆರಿಗೆ ಆಸ್ಪತ್ರೆಯಲ್ಲಿ ಶಶಿಕಲಾ ಮತ್ತು

ಶಿವ ದಂಪತಿಗಳಿಗೆ ಬೆಳಗಿನ ಜಾವ 4.08ಕ್ಕೆ, ನಂದಿನಿ ಲೇಔಟ್‌ ಹೆರಿಗೆ ಆಸ್ಪತ್ರೆಯಲ್ಲಿ ಮುಜಾಕೀರ ಬಾನು ಮತ್ತು ಸೈಯದ್‌ ಸೈಮನ್‌ ದಂಪತಿಗಳಿಗೆ ಬೆಳಗ್ಗೆ 5.36 ನಿಮಿಷಕ್ಕೆ ಹಾಗೂ ತಿಮ್ಮಯ್ಯ ರಸ್ತೆಯ ಹೆರಿಗೆ ಆಸ್ಪತ್ರೆಯಲ್ಲಿ ನೂರ್‌ ಪಾತೀಮಾ ಮತ್ತು ಸೈಯದ್‌ ವಸೀಮ್‌ ದಂಪತಿಗಳಿಗೆ ಬೆಳಗ್ಗೆ 8.22ಕ್ಕೆ ಹೆಣ್ಣು ಮಗು ಜನಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

Advertisement

19 ಆಸ್ಪತ್ರೆಗಳಲ್ಲಿ ಮಾರ್ಚ್‌ವೆರೆಗೂ ಕಾಲಾವಕಾಶ: ಪಿಂಕ್‌ ಬೇಬಿ ಯೋಜನೆಗೆ ಕೆಳೆದ ಬಜೆಟ್‌ನಲ್ಲಿ 1.20 ಕೋಟಿ ರೂ. ಮೀಸಲಿಡಲಾಗಿದ್ದು, ಈ ಹಣ ಬೇರೆಯಾವುದಕ್ಕೂ ಬಳಕೆ ಮಾಡುವುದಿಲ್ಲ ಎಂದು ಮೇಯರ್‌ ಗಂಗಾಬಿಕೆ ಹೇಳಿದ್ದಾರೆ. ಈ ಬಜೆಟ್‌ನ ಅವಧಿ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಅಲ್ಲಿಯವರೆಗೂ ಉಳಿದ 19 ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಯಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ ಈ ಯೋಜನೆಯಡಿ 5 ಲಕ್ಷ ರೂ. ಠೇವಣಿ ಇಡಲಾಗುವುದು ಎಂದು ಅವರು ತಿಳಿಸಿದರು.

ಗಂಗಾನಗರದ ಬಿಬಿಎಂಪಿ ಆಸ್ಪತ್ರೆಯಲ್ಲಿ ರಾತ್ರಿ 1.12ಕ್ಕೆ ಮಗುವಾಯಿತು. ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಮೇಯರ್‌ ಪ್ರಮೀಳ ಆನಂದ್‌ ಆಸ್ಪತ್ರೆಗೆ ಬಂದು ಶುಭಕೋರಿ, ತಾಯಿ ಹೆಸರಲ್ಲಿ 5 ಲಕ್ಷ ರೂ. ಠೇವಣಿ ಇಡಲಾಗುತ್ತದೆ. ಇದನ್ನು ಮಗುವಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು. ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಯೋಜನೆಯಡಿ ಫ‌ಲಾನುಭವಿಯಾಗಿದ್ದು, ಸಾಕಷ್ಟು ಖುಷಿಯಾಯಿತು.
-ಉದಯಕುಮಾರ್‌, ಮಗುವಿನ ತಂದೆ

ನೇಪಾಳದಿಂದ ಬಂದು ಕಳೆದ 5 ವರ್ಷಗಳಿಂದ ಬಿಟಿಎಂ ಆಪಾರ್ಟ್‌ಮೆಂಟ್‌ ಒಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೇನೆ. 8 ರಿಂದ 10 ಸಾವಿರ ರೂ. ಸಂಬಂಳ ಬರುತ್ತದೆ. ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಬೆಳಗ್ಗೆ ಮಗುವಾದ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಬಂದು 5 ಲಕ್ಷ ರೂ. ಕೊಡುತ್ತೇವೆ ಮಗಳನ್ನು ಚನ್ನಾಗಿ ಓದಿಸು ಎಂದರು, ಖಷಿಯಾಯಿತು.
-ಅಕ್ಷಯ್‌ ಬುದ, ಮಗುವಿನ ತಂದೆ 

ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಕಳೆದ ಬಜೆಟ್‌ನಲ್ಲಿ 1.20 ಕೋಟಿ ರೂ. ಮೀಸಲಿರಿಸಲಾಗಿದೆ. ಅದರಂತೆ ಮಂಗಳವಾರ 5 ಹೆಣ್ಣು ಶಿಶು ಜನಿಸಿದ್ದು, ಅವರಿಗೆ ತಲಾ 5 ಲಕ್ಷ ರೂ. ಠೇವಣಿ ಇಡಲಾಗುವುದು. ಮಗುವಿನ ವಿದ್ಯಾಭ್ಯಾಸಕ್ಕಾಗಿ ಮಾತ್ರ ಈ ಹಣ ಬಳಕೆ ಮಾಡಬೇಕು. ಬಡ ಹಾಗೂ ಮಧ್ಯಮ ವರ್ಗದ ಟ್ಯಾಕ್ಸಿ ಚಾಲಕ, ಭದ್ರತಾ ಸಿಬ್ಬಂದಿ ಮಕ್ಕಳು ಈ ಯೋಜನೆಯ ಫ‌ಲಾನುಭವಿಗಳಾಗಿದ್ದು, ಖುಷಿ ವಿಚಾರ. 
-ಗಂಗಾಂಬಿಕೆ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next