Advertisement

ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ

02:13 PM Jul 25, 2022 | Team Udayavani |

ಹುಬ್ಬಳ್ಳಿ: ತಾರಿಹಾಳದ ಕೈಗಾರಿಕೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಕುಟುಂಬದವರಿಗೆ ಸರಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ಹಾಲಪ್ಪ ಆಚಾರ ತಿಳಿಸಿದರು.

Advertisement

ಅಗ್ನಿ ಅವಘಡ ಸಂಭವಿಸಿದ ಕಾರ್ಖಾನೆ ಹಾಗೂ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಗಳನ್ನು ರವಿವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿರಾರರೊಂದಿಗೆ ಅವರು ಮಾತನಾಡಿದರು.

ಮೃತರ ಕುಟುಂಬದವರು ಪರಿಹಾರ ಜೊತೆಗೆ ಮೃತ ಪಟ್ಟವರ ಮಕ್ಕಳಿಗೂ ಮುಂದಿನ ಭವಿಷ್ಯಕ್ಕಾಗಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೃತರ ಮಕ್ಕಳಿಗೆ ಮೂರು ವರ್ಷ ಅನುದಾನ ನೀಡಬಹುದು. ಆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳನ್ನು ಬಾಲವಿಕಾಸ ಮಂದಿರಕ್ಕೆ ಕಳುಹಿಸಲು ಕುಟುಂಬದವರು ಇಚ್ಛಿಸಿದರೆ ಅವರಿಗೂ ರಕ್ಷಣೆ ನೀಡಲಾಗು ವುದು ಎಂದು ಭರವಸೆ ನೀಡಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಅಗ್ನಿ ದುರಂತಕ್ಕೆ ಕಾರಣವಾದ ಮೆ. ಐ.ಸಿ. ಫ್ಲೆàಮ್‌ ಸ್ಪಾರ್ಕಲ್‌ ಕ್ಯಾಂಡಲ್‌ ತಯಾರಿಕಾ ಘಟಕ ಯಾವುದೇ ಅನುಮತಿ ಪಡೆದಿರಲಿಲ್ಲ. ಒಂದು ತಿಂಗಳ ಹಿಂದಷ್ಟೆ ಆರಂಭವಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮೂವರು ಜೀವ ಕಳೆದುಕೊಳ್ಳುವಂತಾಯಿತು. ಕಾರ್ಖಾನೆಯಲ್ಲಿ ಶನಿವಾರ ಒಟ್ಟು 14 ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಘಟನೆಯಲ್ಲಿ 8 ಜನರು ಗಾಯಗೊಂಡಿದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಲೋಪ ಎಸಗಿದ ಅಧಿಕಾರಿಗಳ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪು ಎಸಗಿದವರ ಹೆಡೆಮುರಿ ಕಟ್ಟಲಾಗುವುದು ಎಂದು ಹೇಳಿದರು.

Advertisement

ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್‌ ಆಯುಕ್ತ ಲಾಭೂ ರಾಮ, ಎಸ್ಪಿ ಲೋಕೇಶ ಜಗಲಾಸರ್‌, ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಮೊದಲಾದವರಿದ್ದರು.

ಬಡವರಿಗೊಂದು ಉಳ್ಳವರಿಗೊಂದು ನ್ಯಾಯವೇ?

ಬಡವರು ಚಹಾದ ಡಬ್ಟಾ ಅಂಗಡಿ ಮಾಡ ಬೇಕೆಂದರೂ ಪರವಾನಗಿ ಪಡೆಯ ಬೇಕೆನ್ನುತ್ತಾರೆ. ಆದರೆ, ಸಿಡ್ಡಿಮದ್ದು ತಯಾರಿಸುವ ಕಾರ್ಖಾನೆ ಪರವಾನಗಿ ಇಲ್ಲದೆ ನಡೆಸಲು ಹೇಗೆ ಅವಕಾಶ ಮಾಡಿಕೊಟ್ಟರು. ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಇನ್ನೊಂದು ನ್ಯಾಯವೇ? ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಖಾನೆ ಮಾಲೀಕನ ವಿರುದ್ಧ ಸೂಕ್ತ ಕ್ರಮಗೊಳ್ಳಬೇಕೆಂದು ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರಿಗೆ ಒತ್ತಾಯಿಸಿದರು.

ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಹಾಗೂ ಗಾಯಾಳುಗಳನ್ನು ಭೇಟಿ ಮಾಡಲು ಸಚಿವರು ರವಿವಾರ ಕಿಮ್ಸ್‌ ಆಸ್ಪತ್ರೆಗೆ ಭೇಟಿಕೊಟ್ಟಾಗ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಹಾಗೂ ಕಾರ್ಖಾನೆ ಮಾಲಿಕನ ನಿರ್ಲಕ್ಷéದಿಂದಾಗಿ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ. ತಂದೆಯ ಮುಖವನ್ನೇ ನೋಡದ ಮಗುವಿನ ಗತಿ ಏನು? ದಿನದ ದುಡಿಮೆಯಿಂದಲೇ ಮನೆ ನಡೆಸುತ್ತಿದ್ದ ಮಹಿಳೆಯರು ಜೀವ ತೆತ್ತಿದ್ದಾರೆ. ಅವರಿಗೆ ಸರಕಾರ ಕೊಡುವ 5 ಲಕ್ಷ ರೂ. ಪರಿಹಾರ ಏತಕ್ಕೂ ಸಾಲದು. ಕನಿಷ್ಟ 15 ಲಕ್ಷ ರೂ.ವನ್ನಾದರೂ ಕೊಡಿ. ಕಾರ್ಖಾನೆಯ ಮಾಲೀಕರಿಂದಲೂ ಪರಿಹಾರ ಕೊಡಿಸಿ. ಅಂದಾಗ ಅವರಿಗೂ ಜವಾಬ್ದಾರಿ ಅರಿವಾಗುತ್ತದೆ ಎಂದು ಆಗ್ರಹಿಸಿದರು. ಸಚಿವರು ತಪ್ಪಿತಸ್ಥರ ಮೇಲೆ ಕ್ರಮದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ತಾರಿಹಾಳದಲ್ಲಿ ಮುಖ್ಯರಸ್ತೆ ತಡೆದು ನಡೆಸಲುದ್ದೇಶಿಸಿದ್ದ ಪ್ರತಿಭಟನೆ ನಿರ್ಧಾರದಿಂದ ಹಿಂದೆ ಸರಿದರು.

ತಂದೆ ಮುಖವನ್ನೇ ನೋಡದ ಮಗು

ಅಗ್ನಿ ದುರಂತದಲ್ಲಿ ಮೃತಪಟ್ಟ ಮಾಲೇಶ ಹದಣ್ಣನವರ ಅವರ ಮಗು ಈಗ ತಾನೇ 5 ತಿಂಗಳದ್ದಾಗಿದೆ. ಅದು ತಂದೆಯ ಮುಖವನ್ನೇ ನೋಡಿಲ್ಲ. ಮಗುವಿನ ಮುಂದಿನ ಜೀವನ, ಭವಿಷ್ಯ ಹೇಗೆ? ಸರಕಾರ 5 ಲಕ್ಷ ರೂ. ಪರಿಹಾರ ಕೊಟ್ಟರೆ ಏತಕ್ಕೆ ಸಾಲುತ್ತದೆ. ಸರಕಾರ ಮಗುವಿಗೆ ಉಚಿತವಾಗಿ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಬೇಕು. ಅವರು ಜೀವನ ಸಾಗಿಸಲು ಹೆಚ್ಚಿನ ಪರಿಹಾರ ನೀಡಬೇಕೆಂದು ಮೃತ ಮಾಲೇಶರ ಕುಟುಂಬಸ್ಥರು ಸಚಿವರಲ್ಲಿ ಆಗ್ರಹಿಸಿದರು.

ಜಿಲ್ಲೆಯ 14 ವಲಯಗಳಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಅನುಮತಿ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳನ್ನು ತಕ್ಷಣ ಪರಿಶೀಲನೆ ನಡೆಸಬೇಕು. ಕಾನೂನುಬಾಹಿರ ಕೈಗಾರಿಕೆಗೆ ಅವಕಾಶ ನೀಡಬಾರದು. ಅನಧಿಕೃತ ಕಾರ್ಖಾನೆಗಳಿದ್ದರೆ ಕೂಡಲೇ ಅಂಥವುಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಘಟನೆಗೆ ಸಂಬಂಧಿಸಿ ಇದುವರೆಗೂ ಯಾರನ್ನು ಬಂಧಿಸಿಲ್ಲ. ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಕೈಗಾರಿಕೆಯ ಮಾಲೀಕ ಮುಂಬಯಿಯಲ್ಲಿದ್ದು, ಅವರನ್ನು ಕರೆತರಲು ಪೊಲೀಸ್‌ ತಂಡ ತೆರಳಿದೆ. –ಹಾಲಪ್ಪ ಆಚಾರ, ಜಿಲ್ಲಾ ಉಸ್ತುವಾರಿ ಸಚಿವ

ಅಗ್ನಿದುರಂತದಲ್ಲಿ ಜೀವ ಕಳೆದುಕೊಂಡ ವಿಜಯಲಕ್ಷ್ಮೀ ಯಚ್ಚಲಗಾರ ಕಾರ್ಖಾನೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಇವರು ದುಡಿದರೆ ಜೀವನ. ಗದುಗಿನಲ್ಲಿ ಜೀವನ ಸಾಗದ್ದಕ್ಕೆ ತಾರಿಹಾಳಕ್ಕೆ ಬಂದಿದ್ದರು. ಪತಿ ತಾರಿಹಾಳದ ಕಾರ್ಖಾನೆಯೊಂದರಲ್ಲಿ ವಾಚ್‌ ಮನ್‌ ಆಗಿದ್ದು, 10 ಮತ್ತು 8 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ. ಘಟನೆಯಿಂದ ಅವರಿಗೆ ಏನು ತೋಚದಂತಾಗಿದೆ. ಉಳಿದವರ ಜೀವನ ಸಾಗಿಸಲು ಸರಕಾರ ಮೃತರ ಕುಟುಂಬಕ್ಕೆ 10-15 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಬೇಕು. –ಪ್ರಕಾಶ ಹೂಳಿಕೇರಿ, ಗರಗ, ಮೃತ ವಿಜಯಲಕ್ಷ್ಮೀ ಸಂಬಂಧಿ

 

Advertisement

Udayavani is now on Telegram. Click here to join our channel and stay updated with the latest news.

Next