ಸೀತಾಪುರ, ಉತ್ತರ ಪ್ರದೇಶ : ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಲೆಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನೆವಾಡಾ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಈ ನತದೃಷ್ಟರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ರಕ್ ಢಿಕ್ಕಿಯಾಗಿ ಭೀಕರ ಅವಘಡ ಸಂಭವಿಸಿತೆಂದು ಪೊಲೀಸರು ತಿಳಿಸಿದ್ದಾರೆ.
ಮೃತರೆಲ್ಲರೂ ಬಿಸ್ವಾ ಗ್ರಾಮಕ್ಕೆ ಸೇರಿದವರಾಗಿದ್ದು ಅವರು ವಾಹನವೊಂದರಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು.
ಮೃತರನ್ನು ಇಷ್‌ರತ್ ಅಲಿ 65, ಅವರ ಪತ್ನಿ ವಾಸೀಮ್ ಫಾತಿಮಾ 60, ಪುತ್ರಿ ಮಸೀರಾ 26, ಬಾಬು ಖಾನ್ 55 ಮತ್ತು ನಸೀರ್ ಖಾನ್ ಎಂದು ಗುರುತಿಸಲಾಗಿದೆ.
ಅಲಿ ಅವರ ಇನ್ನೊಬ್ಬ ಪುತ್ರಿ ಸೋನಿ ಮತ್ತು ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಟ್ರಕ್ ಡ್ರೈವರ್ ಅಪಘಾತ ಸಂಭವಿಸಿದೊಡನೆಯೇ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.