Advertisement

5 ನ್ಯಾಯಮೂರ್ತಿಗಳ ನೇಮಕಾತಿಗೆ ಚಾಲನೆ?

06:35 AM Feb 08, 2018 | |

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಹೋರಾಟದ ಬೆನ್ನಲ್ಲೇ ಹೈಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ ಎಂದು ಹೇಳಲಾಗಿದೆ.

Advertisement

ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜಿಯಂ ಮಾಡಿದ ಶಿಫಾರಸಿ ನಂತೆ ಹಿರಿಯ ವಕೀಲರಾದ ದೀಕ್ಷಿತ್‌ ಕೃಷ್ಣ ಶ್ರೀಪಾದ್‌,ಶಂಕರ್‌ ಗಣಪತಿ ಪಂಡಿತ್‌, ರಾಮಕೃಷ್ಣ ದೇವದಾಸ್‌,ಬಿ.ಎಚ್‌.ಮಲ್ಲಿಕಾರ್ಜುನ ಶ್ಯಾಮ್‌ ಪ್ರಸಾದ್‌, ಸುನೀಲ್‌ ದತ್‌ ಯಾದವ್‌ ಅವರ ನೇಮಕಕ್ಕೆ ಬುಧವಾರ ಕೇಂದ್ರ ಕಾನೂನು ಇಲಾಖೆ ಸಮ್ಮತಿಸಿದ್ದು, ಐವರು ನ್ಯಾಯ ಮೂರ್ತಿಗಳ ನೇಮಕಾತಿ ಕಡತವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಶಿಫಾರಸು ಮಾಡಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ರಾಜ್ಯ ಕೊಲಿಜಿಯಂ ಕಳುಹಿಸಿ ಕೊಟ್ಟಿದ್ದ 10 ಮಂದಿ ಹಿರಿಯ ವಕೀಲರ ಪಟ್ಟಿಯಲ್ಲಿ ಈ ಐವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕಗೊಳಿಸುವಂತೆ ಸುಪ್ರೀಂಕೋರ್ಟ್‌ ಕೊಲಿಜಿಯಂ ಡಿ.4ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇನ್ನುಳಿದ ಐವರ ಹೆಸರನ್ನು ಹಲವು ಕಾರಣಗಳಿಗೆ ತಿರಸ್ಕರಿಸಿತ್ತು.

ನಿವೃತ್ತ ನ್ಯಾ.ಸಂತೋಷ್‌ ಹೆಗ್ಡೆ ಸಾಥ್‌: ಬೆಂಗಳೂರು ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್‌ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಭೇಟಿ ನೀಡಿ ಸಾಂಕೇತಿಕ ಬೆಂಬಲ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next