ತೆಲಂಗಾಣ : ಭಾನುವಾರ ಮುಂಜಾನೆ ತೆಲಂಗಾಣದ ಸೂರ್ಯಪೇಟ್‌ನ ಮುನಗಲಾ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್‌ನಲ್ಲಿದ್ದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಟ್ರ್ಯಾಕ್ಟರ್ ನಲ್ಲಿದ್ದವರು ಮುನಗಲ್ ಹೊರವಲಯದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರನ್ನು ತೆನ್ನೇರು ಪ್ರಮೀಳಾ (35), ಚಿಂತಕಾಯಲ ಪ್ರಮೀಳಾ (33), ಉದಯ ಲೋಕೇಶ್ (8), ನರಗೋಣಿ ಕೋಟಯ್ಯ (55), ಗುಂಡು ಜ್ಯೋತಿ (38) ಎನ್ನಲಾಗಿದೆ.
ಟ್ರ್ಯಾಕ್ಟರ್ ನಲ್ಲಿ ಕನಿಷ್ಠ 30 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಸ್ಥಳೀಯರ ಪ್ರಕಾರ, ಟ್ರ್ಯಾಕ್ಟರ್ ರಾಂಗ್ ಸೈಡ್ ನಿಂದ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದೆ. ಇದೇ ವೇಳೆ ವಿಜಯವಾಡ ಕಡೆಗೆ ವೇಗವಾಗಿ ಹೋಗುತ್ತಿದ್ದ ಟ್ರಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿದ್ದ 30 ಮಂದಿ ರಸ್ತೆಗೆ ಬಿದ್ದಿದ್ದಾರೆ. ಇದಾದ ನಂತರ ವೇಗವಾಗಿ ಬಂದ ಟ್ರಕ್ ಟ್ರಾಕ್ಟರ್ ಅನ್ನು ಹಲವು ಮೀಟರ್ ದೂರದವರೆಗೆ ಎಳೆದೊಯ್ದಿದೆ. ಈ ವೇಳೆ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಆರಂಭಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದವನಿಂದಲೇ ಮತ್ತೆ ಬಾಲಕಿಯ ರೇಪ್