ಬೆಂಗಳೂರು: ಪಾದರಾಯಪುರದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇಷ್ಟಾದರೂ ಇಲ್ಲಿನ ಜನ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ. ಅಲ್ಲದೆ, ಏ. 19ರಂದು ಈ ಭಾಗದಲ್ಲಿ ನಡೆದ ದಾಂಧಲೆ ಬಳಿಕ ಪೊಲೀಸರು ಸಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಆದರೆ, ಜನರನ್ನು ಹೊರಬರದಂತೆ ತಡೆಯಲು ಸಾಧ್ಯವಾಗಿಲ್ಲ.
ಅಪಾಯ ತಪ್ಪಿಸಲು ಕ್ವಾರಂಟೈನ್: ಏ.19ರಂದು ಈ ಭಾಗದಲ್ಲಿನ ಕೋವಿಡ್ 19 ಸೋಂಕಿತರ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಿದ್ದರ ಹಿಂದೆ ಎರಡು ಕಾರಣಗಳಿತ್ತು ಎನ್ನುತ್ತಾರೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು. ಮೊದಲನೆಯದು ಇಲ್ಲಿನ ಕೆಲವು ದ್ವಿತೀಯ ಸಂಪರ್ಕಿತರಲ್ಲೂ ಸೋಂಕು ದೃಢಪಟ್ಟಿತ್ತು. ಎರಡನೆಯದು ದ್ವಿತೀಯ ಸಂಪರ್ಕಿತರು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದರು. ಅವರ ಮನೆಗಳಲ್ಲಿ ಸಾಮಾಜಿಕ ಅಂತರವೇ ಇಲ್ಲವಾಗಿತ್ತು. ಅಲ್ಲದೆ, ಹೀಗೆ ದ್ವಿತೀಯ ಸಂಪರ್ಕಿತರಿಂದಲೇ ಮೂರನೆಯವರಿಗೂ ಕೊರೊನಾ ಹರಡುವ ಸಾಧ್ಯತೆಯಿತ್ತು. ಎಲ್ಲವನ್ನೂ ಪರಿಶೀಲಿಸಿ, ದ್ವಿತೀಯ ಸಂಪರ್ಕಿತರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ.
ಈ ಕುರಿತು ಉದಯವಾಣಿ ಜತೆ ಮಾತನಾಡಿದ ಪಶ್ಚಿಮ ವಲಯದ ಬಿಬಿಎಂಪಿ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ, ಪಾದರಾಯನಪುರ ಒಂದರಲ್ಲೇ ಇಲ್ಲಿಯವರೆಗೆ 34 ಪ್ರಕರಣಗಳು ದೃಢಪಟ್ಟಿದ್ದು, ರ್‍ಯಾಂಡಮ್ ಚೆಕ್ ಮಾಡಿದ 70 ಜನರಲ್ಲಿ ಮೂವರಿಗೆ ಕೋವಿಡ್ 19 ದೃಢಪಟ್ಟಿದೆ. ಇನ್ನು 26 ಜನರನ್ನು ಪರೀಕ್ಷಿಸಿದ್ದು, ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ.
ರ್ಯಾಂಡಮ್ ಪರೀಕ್ಷೆಗೆ ಮೊದಲು ಜನ ಒಪ್ಪಲಿಲ್ಲ. ಅವರನ್ನು ಕ್ವಾರಂಟೈನ್ ಮಾಡುತ್ತಿಲ್ಲ ಪರೀಕ್ಷೆ ಮಾಡುತ್ತೇವೆ ಎಂದು ಮನವೊಲಿಸಿದೆವು. ಈ ಭಾಗದಲ್ಲಿ ಜನ ಸಂಚಾರ ನಿಲ್ಲಿಸುತ್ತಿಲ್ಲ. ಪೊಲೀಸರು ಗಸ್ತು ತಿರುಗುವಾಗ ಹಾಗೂ ಬಿಬಿಎಂಪಿ ಎಚ್ಚರಿಕೆ ಸಂದೇಶ ನೀಡುವಾಗ ಒಳಗೆ ಹೋಗುತ್ತಾರೆ. ಬಳಿಕ ಮತ್ತೆ ಹೊರಬರುತ್ತಾರೆ. ರ್‍ಯಾಂಡಮ್ ಚೆಕ್‌ಅಪ್‌ನಲ್ಲಿಯೂ ಕೋವಿಡ್ 19 ಸೋಂಕು ದೃಢಪಡುತ್ತಿರುವುದರಿಂದ ಜನ ಸಹಕಾರ ಅಗತ್ಯ ಎಂದರು.
ಆರ್ಥಿಕವಾಗಿ ಹಿಂದುಳಿದ ಪ್ರದೇಶ : ಸೋಂಕು ತಡೆಗೆ ಪಾದರಾಯನಪುರದ ಮುಖ್ಯ ಸಮಸ್ಯೆಯೆಂದರೆ ಮನೆಗಳ ರಚನೆ ಹಾಗೂ ಪ್ರದೇಶಗಳು. ಇಲ್ಲಿ ಮನೆಗಳು ಒಂದಕ್ಕೊಂದು ಅಂಟಿಕೊಂಡ ರೀತಿಯಲ್ಲಿ ರಚನೆಯಾಗಿವೆ. ಚಿಕ್ಕ ಚಿಕ್ಕ ಮನೆಗಳಲ್ಲಿ ಅವಿಭಕ್ತ ಕುಟುಂಬಗಳು ನೆಲೆಸಿವೆ. ಶುದ್ಧ ಗಾಳಿ, ಬೆಳಕಿನ ಕೊರತೆ ಹಾಗೂ ಮುಖ್ಯವಾಗಿ ಸಾಮಾಜಿಕ ಅಂತರ ಕಾಯದಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.
ಅಪಾಯದ ತೊಟ್ಟಿಲು : ಪಾದರಾಯನಪುರದ ಹರಫತ್ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಈ ಭಾಗದ 6ರಿಂದ 11ನೇಕ್ರಾಸ್ ನಲ್ಲಿ ಅಂದಾಜು ಎರಡು ಸಾವಿರ ಮನೆಗಳಿವೆ. ಎಲ್ಲವೂ ಅಂಟಿಕೊಂಡಂತಿವೆ. ದೃಢಪಟ್ಟ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಿನವು ಈ ಐದು ರಸ್ತೆಯವೇ ಆಗಿದೆ. ಹೀಗಾಗಿ ಸೀಲ್‌ಡೌನ್ ಮಾಡಲಾಗಿದೆ. ಇದರ ಹೊರತಾಗಿಯೂ ಗಲ್ಲಿಗಳಲ್ಲಿ ಜನ ಸುತ್ತಾಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
– ಹಿತೇಶ್. ವೈ