Advertisement

Ramlallah: ಜೀವನಪರ್ಯಂತದ 5 ಕೋಟಿ ರೂ. ಗಳಿಕೆ ರಾಮಲಲ್ಲಾಗೆ ಸಮರ್ಪಣೆ

10:20 PM Nov 21, 2023 | Pranav MS |

ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶ-ವಿದೇಶಗಳಿಂದಲೂ ಭಕ್ತರು ಕೊಡುಗೆ ನೀಡುತ್ತಿರುವ ನಡುವೆಯೇ ರಾಮನ ಅಪ್ಪಟ ಭಕ್ತರಾದ ನಿವೃತ್ತ ಅಧಿಕಾರಿಯೊಬ್ಬರು ಶ್ರೀರಾಮನಿಗಾಗಿ ತಮ್ಮ ಜೀವನಪರ್ಯಂತದ ಗಳಿಕೆಯನ್ನೇ ಮುಡುಪಾಗಿ ಘೋಷಿಸಿದ್ದಾರೆ. ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ 5 ಕೋಟಿ ಮೌಲ್ಯದ ತಮ್ಮೆಲ್ಲಾ ಉಳಿತಾಯವನ್ನು ರಾಮನಿಗೆ ಅರ್ಪಿಸಿದ್ದಾರೆ.

Advertisement

ಹೌದು, ಕೇಂದ್ರದ ಮಾಜಿ ಗೃಹಕಾರ್ಯದರ್ಶಿ ಆಗಿದ್ದಂಥ 1970ರ ಐಎಎಸ್‌ ಬ್ಯಾಚ್‌ನ ಅಧಿಕಾರಿ ಲಕ್ಷ್ಮೀ ನಾರಾಯಣನ್‌ ಅವರು ತಮ್ಮೆಲ್ಲ ಚರ ಮತ್ತು ಸ್ಥಿರ ಆಸ್ತಿಯನ್ನು ರಾಮಲಲ್ಲಾನಿಗೆ ನೀಡುತ್ತಿದ್ದಾರೆ. ಭಗವಾನ್‌ ವಿಷ್ಣುವಿನ ಆರತಿಯ “ನನಗೇನು ಇಷ್ಟವೋ ಎಲ್ಲವನ್ನೂ ನಿನಗೇ ಸಮರ್ಪಿಸುತ್ತೇನೆ, ಇದೆಲ್ಲವೂ ನಿನ್ನದೇ, ನನ್ನದೇನೂ ಇಲ್ಲ’ ಎನ್ನುವಂಥ ಸಾಲುಗಳಿಂದ ಪ್ರಭಾವಿತರಾಗಿರುವ ಅವರು, ರಾಮಲಲ್ಲಾನ ಮೇಲಿನ ಶುದ್ಧ ಭಕ್ತಿಯಿಂದ ಈ ನಿರ್ಣಯ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಅಲ್ಲದೇ, ರಾಮಲಲ್ಲಾನ ಪ್ರತಿಷ್ಠಾಪನೆ ಮುಗಿದ ನಂತರ ವಿಗ್ರಹದ ಮುಂಭಾಗದಲ್ಲಿ 151 ಕೆಜಿಯ ರಾಮಚರಿತಮಾನಸವನ್ನು ಇರಿಸಲು ಉದ್ದೇಶಿಸಲಾಗಿದ್ದು, ತಮ್ಮೆಲ್ಲ ಆಸ್ತಿ ಮೌಲ್ಯವಾದ 5 ಕೋಟಿ ವೆಚ್ಚದಲ್ಲಿ ಅದನ್ನು ರಚಿಸಲು ಬದ್ಧರಾಗಿರುವುದಾಗಿ ನಾರಾಯಣನ್‌ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ನಾರಾಯಣನ್‌ ಅವರು ಪತ್ನಿ ಸಹಿತವಾಗಿ ಅಯೋಧ್ಯೆಗೆ ಭೇಟಿ ನೀಡಿ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರನ್ನು ಭೇಟಿಯಾಗಿ ದೇಣಿಗೆ ನೀಡುವುದಕ್ಕೆ ಅನುಮತಿಯನ್ನೂ ಕೋರಿದ್ದರು.

ಚಿನ್ನಲೇಪಿತ ರಾಮಚರಿತಮಾನಸ?
10,902 ಪದ್ಯಗಳನ್ನು ಒಳಗೊಂಡಿರುವ ಮಹಾಕಾವ್ಯ ರಾಮಚರಿತಮಾನಸ. ಇದರ ಪ್ರತಿಯೊಂದು ಪುಟವನ್ನೂ ತಾಮ್ರದಿಂದ ರಚಿಸಲಾಗುತ್ತದೆ. ವಿಶೇಷವೆಂದರೆ ಪದ್ಯದ ಪ್ರತಿ ಅಕ್ಷರವೂ ಚಿನ್ನ ಲೇಪಿತವಾಗಿರಲಿದೆ. ಪಚ್ಚೆ ಹರಳುಗಳನ್ನು ಚಿನ್ನದಲ್ಲಿ ಮುಳುಗಿಸಿ ಅವುಗಳಿಂದ ಅಕ್ಷರಗಳನ್ನು ಕೆತ್ತನೆ ಮಾಡಲಾಗುವುದು. ಇದಕ್ಕೆ ಒಟ್ಟು 140 ಕೆಜಿ ತಾಮ್ರ ಹಾಗೂ 5ರಿಂದ 7 ಕೆಜಿ ಚಿನ್ನದ ಅಗತ್ಯವಿದೆ. ಅಲಂಕಾರಕ್ಕಾಗಿ ಇನ್ನಿತರೆ ವಸ್ತುಗಳನ್ನೂ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next