ಬೆಂಗಳೂರು: ನಗರದ ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ದೊಡ್ಡಬಿದರಕಲ್ಲು ಗ್ರಾಮದ ಜಮೀನನ್ನು ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಹಾಗೂ ಧ್ಯಾನ ಮಂದಿರ ನಿರ್ಮಾಣಕ್ಕೆ ಪಾಲಿಕೆಗೆ ಹಸ್ತಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬುಧವಾರ ಜಯನಗರದ ಎಂ.ಎನ್.ಕೃಷ್ಣ ರಾವ್ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಶಿವಕುಮಾರ ಸ್ವಾಮೀಜಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಹಾಗೂ ಶಿವಕುಮಾರ ಸ್ವಾಮೀಜಿಯವರ ಪುತ್ಥಳಿ ಅನಾವರಣ ಮಾಡಿದ ಸಿಎಂ ಯಡಿಯೂರಪ್ಪ, ಬಿಬಿಎಂಪಿ ತನ್ನ ಬಜೆಟ್‌ನಲ್ಲಿ ಶಿವಕುಮಾರ ಸ್ವಾಮೀಜಿರವರ ಪುತ್ಥಳಿ ಹಾಗೂ ಧ್ಯಾನ ಮಂದಿರ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮೀಸಲಿರಿಸಿದ್ದು,
ಅಗತ್ಯ ಸ್ಥಳವನ್ನು ಒಂದು ವಾರದೊಳಗೆ ನಗರ ಪಾಲಿಕೆಗೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು. ನಗರದಲ್ಲಿನ ಮಾಲಿನ್ಯ ತಡೆಗಟ್ಟಲು ಹೆಚ್ಚಿನ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕಿದೆ.ನಗರದಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಉದ್ಯಾನವನಗಳನ್ನು ನಿರ್ಮಿಸಲು ಸರಕಾರ ಹೆಚ್ಚಿನ ಆಧ್ಯತೆ ನೀಡುತ್ತದೆ. ಆದ್ದರಿಂದ ಈ ಉದ್ಯಾನವನ ಹೊಸದಾಗಿ ಶಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಬೆಂಗಳೂರಿಗೆ ಉದ್ಯಾನವನ ನಗರಿ ಎಂಬ ಹೆಸರು ಬಳಸಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಜಯನಗರವು ಸೇರಿದೆ. ಉತ್ತಮ ಆಯೋಗ್ಯ ಕಾಪಾಡಿಕೊಳ್ಳಲು ನಿಟ್ಟಿನಲ್ಲಿ ಜನತೆ ಬಹುಮುಖ್ಯ ಪಾತ್ರ ವಹಿಸಬೇಕು ಎಂದರು. ಮೇಯರ್ ಗಂಗಾಂಬಿಕೆ, ನೂತನ ಆಯುಕ್ತ ಎ.ಎಚ್ ಅನಿಲ್ ಕುಮಾರ್, ಉಪ ಮೇಯರ್ ಬಿ.ಭದ್ರೇಗೌಡ, ಕಟ್ಟೆ ಸತ್ಯನಾರಾಯಣ, ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್ ಪಕ್ಷದ ನಾಯಕಿ ನೇತ್ರಾನಾರಾಯಣ್ ಹಾಜರಿದ್ದರು.
ಮುಖ್ಯಮಂತ್ರಿಗಳ ನಿಧಿಗೆ 5 ಲಕ್ಷ ರೂ. ಚೆಕ್: ಎಂ.ಎನ್.ಕೃಷ್ಣರಾವ್ ಪಾರ್ಕ್ ನ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಐದು ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ನಿಧಿಗೆ ಚೆಕ್ ನೀಡಲಾಯಿತು.
ನಗರದ ಜನರು ಒತ್ತಡದ ಜೀವನ ನಡೆಸುತ್ತಿದ್ದಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ವಾರ್ಡ್‌ಗಳ ಉದ್ಯಾನಗಳಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ.
-ಗಂಗಾಂಬಿಕೆ, ಮೇಯರ್ ಬಿಬಿಎಂಪಿ