ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ತನ್ನ ರೌದ್ರಾವತಾರವನ್ನು ಮುಂದುವರಿಸಿದೆ. ಈ ಮಹಾಮಾರಿ ಸೋಂಕಿಗೆ ಭಾನುವಾರದಂದು ಐವರು ಬಲಿಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯು 53ಕ್ಕೆ ಏರಿಕೆಯಾಗಿದೆ. ಇನ್ನೂ ಇದೇ ದಿನ 116 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 2439ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಪ್ರತೀ ದಿನ ಕೋವಿಡ್ 19 ಸೋಂಕಿಗೆ 2-3 ಜನರು ಬಲಿಯಾಗುತ್ತಿದ್ದಾರೆ. ಕಳೆದೆರೆಡು ದಿನದಲ್ಲಿ ಬರೊಬ್ಬರಿ 12 ಜನರು ಸೋಂಕಿಗೆ ಬಲಿಯಾಗಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.
ಶನಿವಾರ ಒಂದೇ ದಿನ 07 ಜನರು ಸೋಂಕಿಗೆ ಬಲಿಯಾಗಿದ್ದರು ಮತ್ತೆ ಭಾನುವಾರ ಐವರು ಸಾವನ್ನಪ್ಪಿದ್ದಾರೆ. ಈ ರೀತಿಯಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ಗಮನಿಸಿದರೆ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಲಾರಂಭಿಸಿದೆ.
ಇನ್ನು ಭಾನುವಾರ ದೃಢಪಟ್ಟ ಸೋಂಕಿತರ ಪೈಕಿ ಗಂಗಾವತಿ ತಾಲೂಕಿನಲ್ಲಿ 33 ಜನ, ಕೊಪ್ಪಳ ತಾಲೂಕಿನಲ್ಲಿ 49 ಜನ, ಕುಷ್ಟಗಿ ತಾಲೂಕಿನಲ್ಲಿ 27 ಜನ, ಯಲಬುರ್ಗಾ ತಾಲೂಕಿನಲ್ಲಿ 7 ಜನ ಸೇರಿ 116 ಜನರಿಗೆ ಸೋಂಕು ದೃಢಪಟ್ಟಿದೆ.
ಒಟ್ಟಾರೆ ಈವರೆಗೂ ಗಂಗಾವತಿ ತಾಲೂಕಿನಲ್ಲಿ 1216, ಕೊಪ್ಪಳ ತಾಲೂಕಿನಲ್ಲಿ 723, ಕುಷ್ಟಗಿ ತಾಲೂಕು 300, ಯಲಬುರ್ಗಾ ತಾಲೂಕು 200 ಸೇರಿದಂತೆ ಒಟ್ಟು 2439 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಇನ್ನೂ ಇದೇ ದಿನದಂದು ಕೋವಿಡ್ 19 ಸೋಂಕಿಗೆ 36 ಜನರು ದಾಖಲಾಗಿದ್ದರೆ, ಆಸ್ಪತ್ರೆಯಿಂದ 24 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 1242 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ 48 ಜನರು ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ.