ಬೀದರ್: ಗಡಿ ನಾಡು ಬೀದರನಲ್ಲಿ ಕೋವಿಡ್-19 ವೈರಸ್ ಅಟ್ಟಹಾಸ ಮುಂದುವರೆದಿದ್ದು, ಜಿಲ್ಲೆಯಲ್ಲಿ ಬುಧವಾರ ಮತ್ತೆ 5 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 284 ಕ್ಕೆ ತಲುಪಿದೆ. ಇನ್ನೊಂದೆಡೆ ಚಿಕಿತ್ಸೆಯಿಂದ ಗುಣಮುಖರಾಗಿರುವ 19 ಜನ ಸೋಂಕಿತರು ಬಿಡುಗಡೆ ಆಗಿದ್ದಾರೆ.
ಮಹಾರಾಷ್ಟ್ರದ ಕಂಟಕದಿಂದ ನಲುಗಿ ಹೋಗಿರುವ ಬೀದರ ಜಿಲ್ಲೆಗೆ ಈಗ ತೆಲಂಗಾಣ ಕಂಟಕ ಶುರುವಾಗಿದೆ. ತೆಲಂಗಾಣದಿಂದ ವಾಪಸ್ಸಾಗಿರುವ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದೆ. ಒಟ್ಟು 5 ಜನ ಸೋಂಕಿತರಲ್ಲಿ 4 ಜನರು ನಗರ/ಪಟ್ಟಣಕ್ಕೆ ಸೇರಿದ್ದಾರೆ.
ಬಸವಕಲ್ಯಾಣ ನಗರದ ಸೀತಾ ಕಾಲೋನಿ, ತಾಲೂಕಿನ ಹಿಪ್ಪರಗಾದಲ್ಲಿ ತಲಾ ಒಂದು ಕೇಸ್, ಚಿಟಗುಪ್ಪ, ಔರಾದ ಪಟ್ಟಣ ಹಾಗೂ ಬೀದರನ ಮಂಗಲಪೇಟ್ ಬಡಾವಣೆಯಲ್ಲಿ ತಲಾ 1 ಕೇಸ್‌ಗಳು ಪತೆಯಾಗಿವೆ.
30 ವರ್ಷದ ಮಹಿಳೆ ಪಿ 5989 ಮತ್ತು 35 ವರ್ಷದ ಮಹಿಳೆ ಪಿ 5992 ರೋಗಿಗಳು ಮಹಾರಾಷ್ಟ್ರ ಸಂಪರ್ಕ ಹೊಂದಿದ್ದರೆ, 32 ವರ್ಷದ ಮಹಿಳೆ ಪಿ 5990, 56 ವರ್ಷದ ಮಹಿಳೆ ಪಿ 5991 ರೋಗಿಗಳು ಪಿ 5434 ರ ಸಂಪರ್ಕ ಹಾಗೂ 37 ವರ್ಷದ ಪುರುಷ ಪಿ 5993 ರೋಗಿಗೆ ತೆಲಂಗಾಣದ ಸಂಪರ್ಕದಿಂದ ರೋಗ ಒಕ್ಕರಿಸಿದೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಒಟ್ಟು 284 ಆದಂತಾಗಿದೆ. ಇದರಲ್ಲಿ 6 ಜನ ಮೃತಪಟ್ಟಿದ್ದರೆ, 151 ಮಂದಿ ಗುಣಮುಖರಾಗಿದ್ದು, ಇನ್ನೂ 127 ಪ್ರಕರಣ ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ಹೇಲ್ತ್ ಬುಲೇಟಿನ್ ದೃಢಪಡಿಸಿದೆ.