ದೇವದುರ್ಗ: ಹಲವು ವರ್ಷಗಳಿಂದ ಕುಡಿವ ನೀರಿನ ಸಮಸ್ಯೆ ಮಧ್ಯೆ ಜೀವನ ಸಾಗಿಸುತ್ತಿರುವ ಹಲವು ದೊಡ್ಡಿಗಳಿಗೆ 5.81 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆಗೆ ಹಳ್ಳದರಾಯನದೊಡ್ಡಿಯಲ್ಲಿ ಮಂಗಳವಾರ ಶಾಸಕ ಕೆ. ಶಿವನಗೌಡ ನಾಯಕ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಈ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಇದನ್ನರಿತು ಪ್ರತಿ ಮನೆಗೂ ನೀರು ಒದಗಿಸುವ ಪ್ರಯತ್ನ ಮಾಡಲಾಗಿದೆ. ಶಾಶ್ವತ ಕುಡಿವ ನೀರಿನ ಯೋಜನೆ ದಿನದ 24 ಗಂಟೆಯೂ ಲಭ್ಯವಿರಲಿದೆ. ಏಳು ದಶಕದ ಬಳಿಕ ಶಾಶ್ವತ ಪರಿಹಾರ ಸಿದಲಿದ್ದು, ದೊಡ್ಡಿಗಳ ನಿವಾಸಿಗಳಿಗೆ ಆಸರೆಯಾಗಲಿದೆ ಎಂದರು.
ಮಡ್ಲೇರ ದೊಡ್ಡಿ, ಗೂಗೇರ ದೊಡ್ಡಿ, ಗುಂಡದವರ ದೊಡ್ಡಿ, ಗಾಲೇರ ದೊಡ್ಡಿ, ದಳೇರ ದೊಡ್ಡಿ, ಕಾಳೇರ ದೊಡ್ಡಿ, ಜಕ್ಲರ ದೊಡ್ಡಿ, ಮಟ್ಲರ ದೊಡ್ಡಿ, ಮಜ್ಗೀರ ದೊಡ್ಡಿ ಹಾಗೂ ಹಾವ್ಲರ ದೊಡ್ಡಿ ಜನರಿಗೆ ಕುಡಿವ ನೀರಿನ ಬವಣೆ ನೀಗಲಿದೆ. ಪಟ್ಟಣದ 23 ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ. ಪಟ್ಟಣದ ಎಲ್ಲ ವಾರ್ಡ್ ಜನರಿಗೆ ನಲ್ಲಿ ಮೂಲಕ ನೀರು ತಲುಪಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂದಾಜು 80 ಕೋಟಿ ರೂ. ವೆಚ್ಚವಾಗಲಿದ್ದು, ಮುಂದಿನ 4 ತಿಂಗಳ ಅವ ಧಿಯಲ್ಲಿ ಕಾಮಗಾರಿ ಶುಂಕು ಸ್ಥಾಪನೆಯಾಗಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್, ಜಿಪಂ ಮಾಜಿ ಸದಸ್ಯ ಪ್ರಕಾಶ ಪಾಟೀಲ್ ಜೇರಬಂಡಿ, ನಿಂಗನಗೌಡ ಜೋಳದಹೆಡಗಿ, ಪುರಸಭೆ ಸದಸ್ಯರಾದ ಜಿ.ಪಂಪಣ್ಣ, ಚಂದ್ರಶೇಖರ ಕುಂಬಾರ, ನಾಗಪ್ಪ ನಾಡದಾಳ, ಚಂದ್ರಶೇಖರ ಛಲವಾದಿ, ನಿಖೀಲ್ ಖೇಣೇದ್, ಬಸವರಾಜ ಗಾಣಧಾಳ, ನಾಗರಾಜ ಪಾಟೀಲ್ ಇದ್ದರು.