Advertisement

ಭಾರತ-ಚೀನ ನಡುವೆ 5.63 ಲಕ್ಷ ಕೋಟಿ ರೂ. ಮೊತ್ತದ ವಹಿವಾಟು

03:06 AM Feb 24, 2021 | Team Udayavani |

ಬೀಜಿಂಗ್‌: 2020ರಲ್ಲಿ ಗಡಿ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಚೀನ ನಡುವೆ ಸಂಬಂಧ ಹದ ಗೆಟ್ಟಿದ್ದ ನಡುವೆಯೂ ಉಭಯ ದೇಶಗಳ ನಡುವಿನ ದ್ವಿಮುಖ ವ್ಯಾಪಾರ ವಹಿವಾಟು ನೆಲಕ್ಕಚ್ಚಿರಲಿಲ್ಲ. ಎರಡೂ ರಾಷ್ಟ್ರಗಳು ಬರೋಬ್ಬರಿ 5.63 ಲಕ್ಷ ಕೋಟಿ ರೂ. ವಹಿವಾಟು ನಡೆಸಿದ್ದು, ಇದು ಬೇರೆಲ್ಲ ರಾಷ್ಟ್ರಗಳಿಗಿಂತ ಅತ್ಯಧಿಕ ಎಂದು ಕೇಂದ್ರ ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ.

Advertisement

ಭಾರತ ಕಳೆದ ವರ್ಷ 4.25 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉತ್ಪನ್ನಗಳನ್ನು ಚೀನದಿಂದ ಆಮದು ಮಾಡಿಕೊಂಡಿತ್ತು. ಈ ಮೊತ್ತ ನಂ.1- ನಂ.2 ಸ್ಥಾನದಲ್ಲಿರುವ ಅಮೆರಿಕ, ಯುಎಇಗಳಿಂದ ಭಾರತ ಮಾಡಿಕೊಳ್ಳುವ ಒಟ್ಟು ಆಮದುಗಿಂತಲೂ ಅಧಿಕ. ಆದರೆ ಒಟ್ಟು 5.63 ಲಕ್ಷ ಕೋಟಿ ರೂ. ವಹಿವಾಟಿನಲ್ಲಿ ಭಾರತ ಕೇವಲ 1.37 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉತ್ಪನ್ನಗಳನ್ನು ಮಾತ್ರವೇ ಚೀನಕ್ಕೆ ರಫ್ತು ಮಾಡಿದೆ. ಅಂದರೆ, ದ್ವಿಮುಖ ವ್ಯಾಪಾರದಲ್ಲಿ ನಮ್ಮ ಪಾಲು ಕೇವಲ ಶೇ.11!

ಭಾರತವು ಚೀನದಿಂದ 2.89 ಲಕ್ಷ ಕೋಟಿ ರೂ. ಮೊತ್ತದ ಭಾರೀ ಯಂತ್ರಗಳು, ಟೆಲಿಕಾಂ ಉಪಕರಣಗಳು, ಗೃಹ ಬಳಕೆ ವಸ್ತುಗಳನ್ನು ಆಮದು ಮಾಡಿಕೊಂಡಿದೆ.

ಸ್ವಾವಲಂಬಿಯಾಗಲು 4-5 ವರ್ಷ ಬೇಕು: ಸ್ಥಳೀಯವಾಗಿ ವಸ್ತುಗಳ ಉತ್ಪಾದನೆಗೆ ಪ್ರಧಾನಿ ಮೋದಿ ಅವರು ಪಿಎಲ್‌ಐ ಯೋಜನೆ (ಉತ್ಪಾದನೆ ಆಧಾರಿತ ಪ್ರೋತ್ಸಾಹಧನ) ಜಾರಿಮಾಡಿದ್ದಾರೆ. ಈ ಅನುದಾನ ಬಳಸಿಕೊಂಡು ಈಗಾಗಲೇ ಸ್ಥಳೀಯವಾಗಿ ವಸ್ತುಗಳ ತಯಾರಿಕೆ ಶುರುವಾಗಿದೆ. “ಪಿಎಲ್‌ಐ ಬಳಸಿಕೊಂಡು ಭಾರತ ಸ್ವಾವಲಂಬಿಯಾಗಲು ಇನ್ನೂ 4-5 ವರ್ಷಗಳು ಬೇಕು. ಅಲ್ಲಿಯವರೆಗೆ ಚೀನ ವಸ್ತುಗಳನ್ನೇ ಅವಲಂ­ಬಿ­ಸ­ಬೇಕಾಗಿದೆ’ ಎನ್ನುತ್ತಾರೆ ಆರ್ಥಿಕ ತಜ್ಞ ಅಮಿತೇಂದು ಪಾಲಿಟ್‌.

45 ಚೀನೀ ಸಂಸ್ಥೆಗಳ ಹೂಡಿಕೆಗೆ ಸಮ್ಮತಿ ವಿಚಾರ ಸುಳ್ಳು
45 ಚೀನೀ ಸಂಸ್ಥೆಗಳಿಗೆ ಹೂಡಿಕೆ ಮಾಡಲು ಭಾರತ ಗ್ರೀನ್‌ ಸಿಗ್ನಲ್‌ ನೀಡುತ್ತಿದೆ ಎಂಬ ಸುದ್ದಿಯನ್ನು ಕೇಂದ್ರ ಸರಕಾರ‌ ಸ್ಪಷ್ಟವಾಗಿ ನಿರಾಕರಿಸಿದೆ. “ಯಾವ ಚೀನೀ ಕಂಪೆನಿಗಳ ಹೂಡಿಕೆಗೂ ಭಾರತ ಸಮ್ಮತಿ ನೀಡಿಲ್ಲ’ ಎಂದು ಸರಕಾರದ ಮೂಲಗಳು ಸ್ಪಷ್ಪಪಡಿಸಿವೆ. “ಹಾಂಕಾಂಗ್‌ ಮೂಲದ 3 ಪ್ರಸ್ತಾವಗಳಿಗಷ್ಟೇ ಒಪ್ಪಿಗೆ ನೀಡಲಾಗಿದೆ. ಸಿಟಿಜನ್‌ ವಾಚಸ್‌, ನಿಪ್ಪಾನ್‌ ಪೇಂಟ್ಸ್‌ ಮತ್ತು ನೆಟ್‌ಪ್ಲೇ ಇಂಥ ಅವಕಾಶ ಪಡೆದಿವೆ. ಇವುಗಳ ಪೈಕಿ 2 ಜಪಾನೀಸ್‌ ಮತ್ತು 1 ಎನ್‌ಆರ್‌ಐಗೆ ಸೇರಿದ ಕಂಪೆನಿಗಳಾಗಿವೆ’ ಎಂದಿದೆ. ಭಾರತದ ಎಫ್ಡಿಐ ಕಾಯ್ದೆಯ ಹೊಸ ತಿದ್ದುಪಡಿಯಂತೆ ಬಿಕ್ಕಟ್ಟು ಹೊಂದಿರುವ ಯಾವುದೇ ನೆರೆರಾಷ್ಟ್ರಗಳು ಸರಕಾರದಿಂದ ರಕ್ಷಣ ವಿಶ್ಲೇ­ಷಣೆಗೊಳಪಟ್ಟೇ ಅನುಮತಿ ಪಡೆಯಬೇಕು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next