ಬೆಂಗಳೂರು: ಎಂಟು ದಿನಗಳ ಅಂತರದಲ್ಲಿ 2,702 ಅನುಸೂಚಿಗಳು ಮತ್ತು 15 ಲಕ್ಷ ಕಿ.ಮೀ. ಸಂಚಾರ ರದ್ದು. ಸಾವಿರಾರು ಪ್ರಯಾಣಿಕರು ಪರದಾಟ. ಒಟ್ಟಾರೆ ಕೆಎಸ್‌ಆರ್‌ಟಿಸಿಗಾದ ನಷ್ಟ 5.40 ಕೋಟಿ ರೂ.! ಇದು ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ಎಫೆಕ್ಟ್. ಉತ್ತರ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಕಳೆದ ಏಳೆಂಟು ದಿನಗಳಿಂದ ಉಂಟಾದ ನೆರೆ ಹಾವಳಿಯಿಂದ ಹತ್ತಾರು ಜನ-ಜಾನುವಾರುಗಳು ಬಲಿ, ಬೆಳೆ ಹಾನಿ ಜತೆಗೆ ಕೆಎಸ್‌ಆರ್‌ಟಿಸಿಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ.
ಆಗಸ್ಟ್ 4ರಿಂದ 12ರವರೆಗೆ ಒಟ್ಟಾರೆ ನಿಗಮದ ವ್ಯಾಪ್ತಿಯಲ್ಲಿ 2,702 ಅನುಸೂಚಿಗಳು ಸಂಪೂರ್ಣವಾಗಿ ರದ್ದಾಗಿದ್ದರೆ, 4,060 ಅನುಸೂಚಿಗಳು ಭಾಗಶಃ ಸ್ಥಗಿತಗೊಂಡವು. ಇದರಿಂದ 5,40 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸ ಲಾಗಿದೆ. ಸಂಪೂರ್ಣ ರದ್ದಾಗಿರುವ ಸೇವೆಗಳಲ್ಲಿ ಮಂಗಳೂರು, ಪುತ್ತೂರು, ಚಿಕ್ಕಮಗ ಳೂರು, ಮೈಸೂರು, ಶಿವಮೊಗ್ಗ ಮಾರ್ಗಗಳು ಹೆಚ್ಚಿವೆ.
ಇಲ್ಲಿ ಕ್ರಮವಾಗಿ 414, 324, 323, 232, 226 ಬಸ್ ಸೇವೆಗಳು ರದ್ದಾಗಿವೆ. ಅದೇ ರೀತಿ, ಭಾಗಶಃ ಬಸ್ ಸೇವೆಗಳು ಸ್ಥಗಿತಗೊಂಡಿದ್ದು ಕೂಡ ಇದೇ ಮಾರ್ಗದಲ್ಲಿ ಬರುತ್ತವೆ. ಇನ್ನು ಸೇವೆ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ 45,233 ಟಿಕೆಟ್‌ಗಳು ರದ್ದಾಗಿದ್ದು, 2.67 ಕೋಟಿ ರೂ. ಪ್ರಯಾಣಿಕರಿಗೆ ಹಿಂಪಾವತಿ ಮಾಡಲಾಗಿದೆ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಮಳೆ ಇಳಿಮುಖವಾಗಿದ್ದು, ನೆರೆ ಹಾವಳಿ ಕೂಡ ತಗ್ಗಿದ ಪರಿಣಾಮ ಸೋಮವಾರದಿಂದ ಕೆಲವು ರಸ್ತೆಗಳಲ್ಲಿ ಬಸ್ ಸಂಚಾರ ಪುನಾರಂಭಗೊಂಡಿದೆ. ಬೆಂಗಳೂರು-ಮಂಗಳೂರು ನಡುವೆ ಕಡಿತಗೊಂಡಿದ್ದ ರಸ್ತೆ ಸಂಪರ್ಕ ಕೊಂಡಿ ಪುನಃ ಬೆಸೆದಿದ್ದು, ಹಗಲು ಈ ಮಾರ್ಗದಲ್ಲಿ ಶಿರಾಡಿ ಘಾಟ್ ಮೂಲಕ ಹಾಗೂ ರಾತ್ರಿ ಮಡಿಕೇರಿ ಮೂಲಕ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.
ಅದೇ ರೀತಿ, ಬೆಂಗಳೂರು-ಕೇರಳ, ಶಿವಮೊಗ್ಗ-ಮಂಗಳೂರು-ಧರ್ಮಸ್ಥಳ, ಬೆಂಗಳೂರು-ಉಡುಪಿ (ರಾತ್ರಿ ಸೇವೆಗೆ ಅನುಮತಿ ಇಲ್ಲ), ಚಿಕ್ಕಮಗಳೂರು-ಉಡುಪಿ (ಶೃಂಗೇರಿ ಮೂಲಕ), ಮೈಸೂರಿನಿಂದ ಕುಶಾಲನಗರ, ನಂಜನಗೂಡು, ಎಚ್.ಡಿ. ಕೋಟೆ ಮತ್ತಿತರ ಮಾರ್ಗಗಳಲ್ಲಿ ಸೇವೆ ಮತ್ತೆ ಆರಂಭಗೊಂಡಿದೆ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.