ಹೊಸದಿಲ್ಲಿ: ಆಡಳಿತಾರೂಢ ಬಿಜೆಪಿಗೆ ಮಹತ್ವದ್ದು ಎನಿಸಿರುವ ನಾಲ್ಕನೇ ಹಂತದ ಮತದಾನ ಸೋಮವಾರ ಮುಕ್ತಾಯವಾಗಿದೆ. ಪಶ್ಚಿಮ ಬಂಗಾಲದಲ್ಲಿ ಕೇಂದ್ರ ಸಚಿವ ಬಾಬುಲಾಲ್ ಸುಪ್ರಿಯೋ ಅವರ ಕಾರು ಧ್ವಂಸ ಸೇರಿದಂತೆ ಕೆಲವು ಹಿಂಸಾತ್ಮಕ ಘಟನೆಗಳು ನಡೆದಿವೆ.
ಒಂಬತ್ತು ರಾಜ್ಯಗಳ 72 ಕ್ಷೇತ್ರಗಳಿಗೆ ನಡೆದ ಮತದಾನ ಸೋಮವಾರ ಪೂರ್ಣಗೊಂಡಿದ್ದು, ಶೇ. 64ರಷ್ಟು ಹಕ್ಕು ಚಲಾವಣೆಯಾಗಿದೆ. ಪ. ಬಂಗಾಲದಲ್ಲಿ 4ನೇ ಹಂತದ ಮತದಾನದಲ್ಲೂ ಹಿಂಸಾಚಾರ, ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ಹೀಗಾಗಿ ಬಿಜೆಪಿ ಚುನಾವಣ ಆಯೋಗಕ್ಕೆ ದೂರು ನೀಡಿ ಅಲ್ಲಿ ಮುಂದಿನ ಹಂತಗಳಲ್ಲಿ ನಡೆಯಲಿರುವ ಚುನಾವಣೆ ವೇಳೆ ಸಂಪೂರ್ಣವಾಗಿ ಕೇಂದ್ರ ಪಡೆಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದೆ.
ಒಡಿಶಾ, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಇವಿಎಂ ದೋಷದಿಂದ ಮತದಾನ ವಿಳಂಬವಾಗಿದೆ. ಪ. ಬಂಗಾಲದಲ್ಲಿ ಶೇ. 76.47, ಉತ್ತರ ಪ್ರದೇಶದಲ್ಲಿ ಶೇ. 53.12, ಮಧ್ಯಪ್ರದೇಶದಲ್ಲಿ ಶೇ. 65.86, ರಾಜಸ್ಥಾನದಲ್ಲಿ ಶೇ. 62ರಷ್ಟು ಹಕ್ಕು ಚಲಾವಣೆಯಾಗಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 72 ಸ್ಥಾನಗಳ ಪೈಕಿ 56ರಲ್ಲಿ ಜಯ ಸಾಧಿಸಿತ್ತು.
ಮುಂಬಯಿಯಲ್ಲಿ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಐಶ್ವರ್ಯಾ-ಅಭಿಷೇಕ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಕಿರಣ್ ರಾವ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಛೋಪ್ರಾ, ರೇಖಾ ಸೇರಿದಂತೆ ಪ್ರಮುಖರು ಹಕ್ಕು ಚಲಾಯಿಸಿದರು ಮತ್ತು ಸಾರ್ವಜನಿಕರಿಗೆ ಮತ ಹಾಕುವಂತೆ ಪ್ರೇರೇಪಿಸಿದರು.