ನವದೆಹಲಿ: ಇತ್ತೀಚೆಗಷ್ಟೇ ಲೋಗೋ ಬದಲಿಸುವ ಮೂಲಕ ಸುದ್ದಿಯಾಗಿದ್ದ ನೋಕಿಯಾ ಸಂಸ್ಥೆ, ಇದೀಗ ತನ್ನ ವಿಶೇಷ ಘೋಷಣೆಯ ಮೂಲಕ ಮತ್ತೆ ಸುದ್ದಿಯಾಗಿದೆ.
ವರ್ಷಾಂತ್ಯದಲ್ಲಿ ಚಂದ್ರನಲ್ಲೇ 4ಜಿ ಸೇವೆಯನ್ನು ಸ್ಥಾಪಿಸಲು ಸಂಸ್ಥೆ ಉದ್ದೇಶಿಸಿದ್ದು, ಈಗಾಗಲೇ ಈ ಸಂಬಂಧಿಸಿದ ಕಾರ್ಯ ಆರಂಭಿಸಿರುವುದಾಗಿ ತಿಳಿಸಿದೆ.
ಸಂಸ್ಥೆಯ ಪ್ರಧಾನ ಇಂಜಿನಿಯರ್ ಆಗಿರುವ ಲೂಯಿಸ್ ಮೆಸ್ಟ್ರೋ ರೂಯಿಜ್ ಡಿ ಟೆಮಿನೋ ಈ ಕುರಿತು ಮಾಹಿತಿ ನೀಡಿದ್ದು, ಚಂದ್ರನಲ್ಲಿ ನೆಟ್ ವರ್ಕ್ ಸ್ಥಾಪನೆಗೆ ಬೇಕಿರುವ ಉಪಕರಣಗಳನ್ನು ಸಾಗಿಸಲು ಸ್ಪೇಸ್-ಎಕ್ಸ್ ರಾಕೆಟ್‌ಗಳನ್ನು ಬಳಕೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
ಇತ್ತೀಚೆಗಷ್ಟೇ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಯೋಜನೆ ಸಂಬಂಧಿಸಿದ ಮಾಹಿತಿಯನ್ನು ಟೆಮಿನೋ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಆ ಪ್ರಕಾರ ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯಾದ ಇಂಟಿಟ್ಯೂವ್ ಮಿಷನ್ಸ್ ವಿನ್ಯಾಸಗೊಳಿಸಿದ ನೋವಾ ಸಿ-ಲ್ಯಾಂಡರ್ ಹಾಗೂ ಆ್ಯಂಟೆನಾವನ್ನು ಬೇಸ್ ಸ್ಟೇಷನ್‌ನಲ್ಲಿ ಅಳವಡಿಸಲಾಗಿದ್ದು, ಅದರ ಸಹಾಯದ ಮೂಲಕ 4ಜಿ ನೆಟ್ ವರ್ಕ್ ಕಾರ್ಯನಿರ್ವಹಿಸಲಿದೆ.
ಲ್ಯಾಂಡರ್ ಹಾಗೂ ಲಾಂಚ್ ವೆಹಿಕಲ್‌ನ ರೋವರ್ ನಡುವೆ 4ಜಿ ಸಂಪರ್ಕ ಸ್ಥಾಪಿಸಲಾಗುತ್ತದೆ. ಇದು ಬಾಹ್ಯಾಕಾಶದಲ್ಲಿ ಎದುರಾಗುವ ಸಂಭವನೀಯ ಪರಿಸ್ಥಿತಿ ನಿಭಾಯಿಸಲು ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದಿದ್ದಾರೆ.