Advertisement

49 ಹೊಸ ತಾಲೂಕುಗಳ ರಚನೆ

06:55 AM Sep 08, 2017 | |

ಬೆಂಗಳೂರು: ಉಡುಪಿ ಜಿಲ್ಲೆಯ ಬ್ರಹ್ಮಾವರ,ಕಾಪು, ಬೈಂದೂರು, ಹೆಬ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಯ ಮೂಡಬಿದರೆ, ಕಡಬ ಸೇರಿ 49 ಹೊಸ ತಾಲೂಕುಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಈ ಮೂಲ ಕ ಕಳೆದ ನಾಲ್ಕೂವರೆ ವರ್ಷಗಳಿಂದ ಮುಂದೂಡುತ್ತಲೇ ಬಂದಿರುವ ಹೊಸ ತಾಲೂಕುಗಳ ರಚನೆ ಕೊನೆಗೂ ಈಡೇರಿದೆ. ಆದರೆ, ಈ ಹೊಸ ತಾಲೂಕುಗಳು 2018ರ ಜನವರಿಯಿಂದ ಅಸ್ತಿತ್ವಕ್ಕೆ ಬರಲಿವೆ. ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ 49 ಹೊಸ ತಾಲೂಕುಗಳನ್ನು ಜನವರಿ 2018ರಿಂದ ಅನ್ವಯವಾಗುವಂತೆ ರಚನೆ ಮಾಡಲು ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಂದಾಯ ಇಲಾಖೆಯ ವತಿಯಿಂದ ಹೊಸ ತಾಲೂಕು ಕಚೇರಿಗಳನ್ನು ತೆರೆಯಲು ಮತ್ತು ಇತರೆ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಕೆ ಸಹಮತದೊಂದಿಗೆ ಹಂತ ಹಂತವಾಗಿ ತೆರೆಯಬೇಕು. ಇದಕ್ಕೆ ತಗಲುವ ವೆಚ್ಚವನ್ನು ಆಯವ್ಯಯದ ಲೆಕ್ಕ ಶೀರ್ಷಿಕೆಯಡಿ ಭರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ, ನಿರ್ದಿಷ್ಟವಾಗಿ ಅನುದಾನ ನಿಗದಿಪಡಿಸಿಲ್ಲ.ಪ್ರಸ್ತುತ 175 ತಾಲೂಕುಗಳಿದ್ದು ಹೊಸದಾಗಿ 49 ತಾಲೂಕುಗಳು ಸೇರಿದರೆ 224 ತಾಲೂಕುಗಳಾಗಲಿವೆ.

ನಾಲ್ಕೂವರೆ ವರ್ಷದ ಬಳಿಕ ಆದೇಶ:
ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ರಚಿಸುವ ಬಗ್ಗೆ 2013-14ನೇ ಸಾಲಿನ ಆಯವ್ಯಯದಲ್ಲಿ ಜಗದೀಶ ಶೆಟ್ಟರ್‌ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಮೇ ತಿಂಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಬಳಿಕ ಜುಲೈನಲ್ಲಿ ಹೊಸ ಬಜೆಟ್‌ ಮಂಡಿಸಲಾಯಿತಾದರೂ ಅದರಲ್ಲಿ ತಾಲೂಕು ರಚನೆ ಬಗ್ಗೆ ಪ್ರಸ್ತಾಪ ಇರಲಿಲ್ಲ. ಇದರಿಂದ ಹೊಸ ತಾಲೂಕುಗಳ ರಚನೆ ನನೆಗುದಿಗೆ ಬಿದ್ದಿತ್ತು. ನಂತರ ಪ್ರತಿ ಆಯವ್ಯದಲ್ಲಿ ಈ ತಾಲೂಕುಗಳ ರಚನೆ ಬಗ್ಗೆ ಪ್ರಸ್ತಾಪಿಸಲಾಗುತ್ತಿತ್ತಾದರೂ ಅನುದಾನ ನಿಗದಿಪಡಿಸಿರಲಿಲ್ಲ. ಆದರೆ, 2017-18ನೇ ಸಾಲಿನ ಆಯವ್ಯದಲ್ಲಿ ಶೆಟ್ಟರ್‌ ನೇತೃತ್ವದ ಸರ್ಕಾರ ಘೋಷಿಸಿದ್ದ 43 ತಾಲೂಕುಗಳ ಜತೆಗೆ ಇನ್ನೂ ಆರು ಸೇರಿ ಒಟ್ಟು 49 ಹೊಸ ತಾಲೂಕುಗಳನ್ನು ರಚಿಸುವ ಬಗ್ಗೆ ಘೋಷಿಸಲಾಗಿತ್ತು. ಜತೆಗೆ ಕಳೆದ ಆಗಸ್ಟ್‌ ಅಂತ್ಯಕ್ಕೆ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮತಿ ನೀಡಲಾಗಿತ್ತು. ಅದರಂತೆ ಹೊಸ ತಾಲೂಕು ರಚನೆ ಆದೇಶ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next