Advertisement

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

12:49 PM Jan 04, 2025 | Team Udayavani |

ಭಾರತದ ಮುಕೇಶ್‌ ಅಂಬಾನಿ, ಅದಾನಿ, ಟಾಟಾ, ಬಿರ್ಲಾ  ಅಜೀಂ ಪ್ರೇಮ್‌ ಜೀ, ನಾರಾಯಣ ಮೂರ್ತಿ, ಅಮೆರಿಕದ ಸುಂದರ್‌ ಪಿಚೈ, ಸತ್ಯ ನಾದೆಲ್ಲಾ, ಟಿ.ಡಿ. ಕೂಕ್‌ ಹೀಗೆ ಹಲವು ಉದ್ಯಮಿಗಳು, ಸಿಇಒಗಳ ಸಂಬಳ ಕೋಟಿ, ಕೋಟಿ ರೂಪಾಯಿ ಲೆಕ್ಕಾಚಾರದಲ್ಲಿದೆ…ಆದರೆ ಜಗತ್ತಿನಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಯಾರು ಗೊತ್ತಾ? ಈ ವ್ಯಕ್ತಿಯ ವಾರ್ಷಿಕ ಸಂಬಳ ಬರೋಬ್ಬರಿ 17, 500 ಕೋಟಿ ರೂಪಾಯಿ! ಅಬ್ಬಾ ಇದೇನು ಅಂತ ಹುಬ್ಬೇರಿಸಬೇಡಿ…

Advertisement

ಹೌದು ಭಾರತೀಯ ಮೂಲದ ಕ್ಯಾಲಿಫೋರ್ನಿಯಾದ ಕ್ವಾಂಟಮ್‌ ಸ್ಕೇಪ್ಸ್‌ ಫೌಂಡರ್‌ ಮತ್ತು ಮಾಜಿ ಸಿಇಒ ಜಗದೀಪ್‌ ಸಿಂಗ್‌ ಅವರು ಪ್ರತಿದಿನ ಪಡೆಯುತ್ತಿದ್ದ ಸಂಬಳ 48 ಕೋಟಿ ರೂಪಾಯಿ!

ಜಗದೀಪ್‌ ಸಿಂಗ್‌ ವಿದ್ಯಾಭ್ಯಾಸ:

ನವದೆಹಲಿಯಲ್ಲಿ ಜನಿಸಿದ್ದ ಜಗದೀಪ್‌ ಸಿಂಗ್‌ ಅಮೆರಿಕದ ಮೇರಿಲ್ಯಾಂಡ್‌ ಯೂನಿರ್ವಸಿಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ನಲ್ಲಿ ಪದವಿ ಪಡೆದಿದ್ದರು. ನಂತರ ಸ್ಟ್ಯಾನ್‌ ಫೋರ್ಡ್‌ ಯೂನಿರ್ವಸಿಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ನಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದರು. ಬಳಿಕ ಬರ್ಕ್ಲೈಯ ಹಾಸ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ ವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದರು.

Advertisement

ವೃತ್ತಿ ಜೀವನ:

ಸನ್‌ ಮೈಕ್ರೋಸಿಸ್ಟಮ್ಸ್‌, ಸಿಯೆನಾ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಹಲವು ಸ್ತರದ ಹುದ್ದೆಗಳಲ್ಲಿ ಸಿಂಗ್ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಏರ್‌ ಸಾಫ್ಟ್‌, ಲೈಟರ್ಸ್‌ ನೆಟ್‌ ವರ್ಕ್ಸ್‌ ಹಾಗೂ ಇನ್ಫಿನೆರಾ ಸೇರಿದಂತೆ ಹಲವು ಕಂಪನಿಗಳ ಸ್ಥಾಪಕರಾಗಿದ್ದಾರೆ‌ ಜಗದೀಪ್‌ ಸಿಂಗ್. ತಂತ್ರಜ್ಞಾನ ಮುಂದುವರಿದಂತೆ ಸಿಂಗ್‌ ಅವರು ಕೂಡಾ ಬ್ಯಾಟರಿ ತಂತ್ರಜ್ಞಾನ ಕ್ಷೇತ್ರದತ್ತ ಮುಖಮಾಡಿದ್ದರು. 2010ರಲ್ಲಿ ಭವಿಷ್ಯದ ದೃಷ್ಟಿಕೋನದಿಂದ ಕ್ವಾಂಟಮ್‌ ಸ್ಕೇಪ್ಸ್‌ ಎಂಬ ಇವಿ ಕಂಪನಿಯನ್ನು ಸ್ಥಾಪಿಸಿದ್ದರು. ಈ ಟೆಕ್‌ ಇಂಡಸ್ಟ್ರಿಗೆ ವೋಕ್ಸ್‌ ವ್ಯಾಗನ್‌ ಮತ್ತು ಮೈಕ್ರೋಸಾಫ್ಟ್‌ ಮಾಜಿ ಸಿಇಒ ಬಿಲ್‌ ಗೇಟ್ಸ್‌ ಕೂಡಾ ಬಂಡವಾಳ ಹೂಡಿದ್ದರು ಎಂಬುದು ವಿಶೇಷ.

ಕ್ಯಾಂಟಮ್‌ ಸ್ಕೇಪ್‌ ಕಂಪನಿಯಲ್ಲಿ ಜಗದೀಪ್‌ ಸಿಂಗ್‌ ಅವರು ಇಲೆಕ್ಟ್ರಿಕ್‌ ವಾಹನಗಳ ಸಾಲಿಡ್‌ ಬ್ಯಾಟರೀಸ್‌ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬ್ಯಾಟರಿಗಳು ಇಲೆಕ್ಟ್ರಿಕ್‌ ವಾಹನಗಳ ಫರ್ಮಾಮೆನ್ಸ್‌ ದಿಕ್ಕನ್ನೇ ಬದಲಿಬಿಟ್ಟಿತ್ತು. ಲಿಥಿಯಂ ಐಯಾನ್‌ ಬ್ಯಾಟರೀಸ್‌ ಗಳ ಅಳವಡಿಕೆಯಿಂದ ಇವಿ ವಾಹನಗಳ ಸುರಕ್ಷತೆ ಹಾಗೂ ವೇಗದ ಚಾರ್ಜಿಂಗ್‌ ನಿಂದ ಗುಣಮಟ್ಟ ಹೆಚ್ಚಲು ಕಾರಣವಾಗಿತ್ತು.

ಸಿಂಗ್‌ ಸಮರ್ಥ ನಾಯಕತ್ವದ ಪರಿಣಾಮ ಕ್ವಾಂಟಮ್‌ ಸ್ಕೇಪ್‌ ಕಂಪನಿ ಇವಿ ಕ್ಷೇತ್ರದಲ್ಲಿ ಅತೀ ವೇಗದ ಬೆಳವಣಿಗೆ ಕಂಡಿದ್ದು, ಅವರ ನೂತನ ಆವಿಷ್ಕಾರ, ಕಂಪನಿಗೆ ನೀಡಿದ ಕೊಡುಗೆ ಪರಿಗಣಿಸಿ ಬೃಹತ್‌ ಮೊತ್ತದ ಸಂಬಳದ ಪ್ಯಾಕೇಜ್‌ ನೀಡಿತ್ತು. ಇದು ಅವರನ್ನು ಜಗತ್ತಿನಲ್ಲೇ ಅತೀ ಹೆಚ್ಚು ಸಂಬಳ ಪಡೆದ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕಾರಣವಾಗಿದೆ.

ಜಗದೀಪ್‌ ಸಿಂಗ್‌ ಅವರು ಕ್ಯಾಂಟಮ್‌ ಸ್ಕೇಪ್‌ ಸಿಇಒ ಸ್ಥಾನಕ್ಕೆ 2024ರಲ್ಲಿ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಶಿವ ಶಿವರಾಮ್‌ ಅವರನ್ನು ನೇಮಕ ಮಾಡಲಾಗಿದೆ. ಸಿಂಗ್‌ ಈಗ ಸ್ಟೆಲ್ತ್‌ ಸ್ಟಾರ್ಟ್‌ ಅಪ್‌ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next