Advertisement

ಕಿಚ್ಚನಿಗೆ ಬರ್ತ್ ಡೇ ಸಂಭ್ರಮ ; 47ನೇ ವಸಂತಕ್ಕೆ ಕಾಲಿಡುತ್ತಿರುವ ನಟ ಸುದೀಪ್‌

12:26 PM Sep 02, 2020 | Suhan S |

ನಟ ಕಿಚ್ಚ ಸುದೀಪ್‌ ಅವರಿಗೆ ಇಂದು (ಸೆ. 2) ಜನ್ಮದಿನದ ಸಂಭ್ರಮ. 47ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್‌ ಅವರಿಗೆ ಚಿತ್ರೋದ್ಯಮದಿಂದ, ಅಭಿಮಾನಿ  ಗಳಿಂದ, ವಿವಿಧ ಕ್ಷೇತ್ರಗಳ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಪ್ರತಿವರ್ಷ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಸಾರ್ವಜನಿಕವಾಗಿ, ಅದ್ಧೂರಿಯಾಗಿ ಆಚರಿಸಿ ಕೊಂಡು ಬರುತ್ತಿದ್ದ ಕಿಚ್ಚನ ಅಭಿಮಾನಿಗಳ ಬರ್ತ್‌ಡೇ ಸಂಭ್ರಮಾ ಚರಣೆಗೆ ಈ ಬಾರಿ ಕೋವಿಡ್ ಬ್ರೇಕ್‌ ಹಾಕಿದೆ.

Advertisement

ಹೌದು, ಕೋವಿಡ್ ಲಾಕ್‌ಡೌನ್‌ನ ಕೆಲ ನಿಯಮಗಳು ಇನ್ನೂ ಜಾರಿಯಲ್ಲಿರುವು ದರಿಂದ, ಗುಂಪಾಗಿ ಸಭೆ – ಸಮಾರಂಭಗಳನ್ನು ನಡೆಸುವುದಕ್ಕೆ ಸದ್ಯಕ್ಕೆ ಅನುಮತಿಯಿಲ್ಲ. ಇನ್ನು ತಮ್ಮ ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಿಗೆ ಸುದೀರ್ಘ‌ ಪತ್ರ ಬರೆದಿರುವ ಸುದೀಪ್‌, ಈ ಬಾರಿ ತಮ್ಮ ಮನೆಮುಂದೆ ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡದೆ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದಾರೆ.

ಹೀಗಾಗಿ, ಈ ವರ್ಷ ಕಿಚ್ಚನ ಅಭಿಮಾನಿಗಳು ಅನಿವಾರ್ಯವಾಗಿ ಆದಷ್ಟು ಸರಳವಾಗಿ ತಮ್ಮ ನೆಚ್ಚಿನ ನಟನ ಬರ್ತ್‌ಡೇ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಪ್ರತಿವರ್ಷದಂತೆ ಈ ವರ್ಷ ಕೂಡ ಕಿಚ್ಚನನ್ನು ಕಂಡು, ಬರ್ತ್‌ಡೇ ಶುಭಾಶಯ ಹೇಳಲು ಕಾದು ಕುಳಿತಿದ್ದ ಅದೆಷ್ಟೋ ಸಂಖ್ಯಾತ ಅಭಿಮಾನಿಗಳಿಗೆ ಕೋವಿಡ್ ಆತಂಕ ನಿರಾಸೆ ಮೂಡಿಸಿರುವುದಂತೂ ಸುಳ್ಳಲ್ಲ.

ಸ್ಪೆಷಲ್‌ ಮೋಶನ್‌ ಪೋಸ್ಟರ್‌, ಬಯೋಗ್ರಫಿ ರಿಲೀಸ್‌ : ಸುದೀಪ್‌ ಅವರ ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳು ವಿಶೇಷವಾದ ಮೋಶನ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ. “ಡಾ. ವಿಷ್ಣು ಸುದೀಪ್‌ ಸೇನೆ’ ಈ ಮೋಶನ್‌ ಪೋಸ್ಟರ್‌ ವಿನ್ಯಾಸಗೊಳಿಸಿದ್ದು, ಈ ಮೋಶನ್‌ ಪೋಸ್ಟರ್‌ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ಮತ್ತು ಸುದೀಪ್‌ ಅವರ ಕಟೌಟ್‌ ಗಮನ ಸೆಳೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಮೋಶನ್‌ ಪೋಸ್ಟರ್‌ ವೈರಲ್‌ ಆಗುತ್ತಿದ್ದು, ಸುದೀಪ್‌ ಅಭಿಮಾನಿಗಳು ಇದನ್ನು ಎಲ್ಲೆಡೆ ಇದನ್ನು ಶೇರ್‌ ಮಾಡುತ್ತಿದ್ದಾರೆ. ಇನ್ನು ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಪ್ರಯುಕ್ತ, ಸುದೀಪ್‌ ಅವರ ಜೀವನ ಮತ್ತು ಸಾಧನೆಗಳನ್ನು ಬಿಂಬಿಸುವ ಅವರ ಜೀವನ ಚರಿತ್ರೆ ಕೃತಿ ಬಿಡುಗಡೆಯಾಗುತ್ತಿದೆ. ಶರಣು ಹುಲ್ಲೂರು ಬರೆದಿರುವ ಈ ಪುಸ್ತಕವನ್ನು ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಬಿಡುಗಡೆ ಮಾಡುತ್ತಿದ್ದಾರೆ. ಸುಮಾರು 200 ಪುಟಗಳ ಕೃತಿಯಲ್ಲಿ 25 ವರ್ಷಗಳ ಸುದೀಪ್‌ ಅವರ ಸಿನಿಮಾ ಯಾನ ಅನಾವರಣ ವಾಗುತ್ತಿದೆ. ಇದಲ್ಲದೆ ಸುದೀಪ್‌ ಅಭಿನಯದ ಮುಂಬರುವ ಕೆಲ ಚಿತ್ರಗಳ ಟೈಟಲ್‌, ಮೋಶನ್‌ ಪೋಸ್ಟರ್‌, ಹಾಡುಗಳು ಬರ್ತ್‌ಡೇ ವೇಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

ಇಷ್ಟು ವರ್ಷ ನನ್ನ ಪರವಾಗಿ ನಿಂತಿದ್ದಕ್ಕೆಧನ್ಯವಾದಗಳು: ಫ್ಯಾನ್ಸ್‌ ಗೆ ಪತ್ರ : ಇನ್ನು ಈ ಬಾರಿ ಎಲ್ಲೆಡೆ ಕೋವಿಡ್ ಆತಂಕ ಮನೆಮಾಡಿರುವುದರಿಂದ, ನಟ ಸುದೀಪ್‌ ಕೂಡ ಅಭಿಮಾನಿಗಳು ಗುಂಪು ಗುಂಪಾಗಿ ಸೇರಿ ಬರ್ತ್‌ಡೇ ಸಭೆ-ಸಮಾರಂಭಗಳನ್ನು ಮಾಡದಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳಿಗೆ ಸುದೀರ್ಘ‌ ಪತ್ರ ಬರೆದಿರುವ ಸುದೀಪ್‌, “ಬಹಳ ವರ್ಷಗಳಿಂದ ನಿಮ್ಮನ್ನೆಲ್ಲಾ ಭೇಟಿಯಾಗುವುದು ಒಂದು ಸಂಸ್ಕೃತಿಯಂತಾಗಿದೆ ಹಾಗೂ ಬೇರೆ ಯಾವುದೇ ಸಂತೋಷ ಅದನ್ನು ಬದಲಾಯಿಸಲು ಆಗದು ಶುಭಾಶಯ ಕೋರಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ನಿಮ್ಮೊಂದಿಗೆ ಒಂದು ದಿನ ಪೂರ್ತಿ ಸಮಯ ಕಳೆಯುವ ಅವಕಾಶ ನನಗೆ ಸಿಗುತ್ತಿತ್ತು. ಸದ್ಯದ ಪರಿಸ್ಥಿತಿ ಅನುಮತಿಸುತ್ತಿಲ್ಲ ಅಥವಾ ಬೆಂಬಲಿಸುತ್ತಿಲ್ಲ. ನಿಮ್ಮೆಲ್ಲರನ್ನೂ ಭೇಟಿಯಾಗಲು ಯಾವುದೇ ಆಚರಣೆ ಅಥವಾ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಹೇಳಲು ನಾನು ವಿಷಾದಿಸುತ್ತೇನೆ. ನಾನು ನಿಮ್ಮೆಲ್ಲರ ಹಾಗೂ ನನ್ನ ವಯಸ್ಸಾಗುತ್ತಿರುವ ಹೆತ್ತವರ ಆರೋಗ್ಯವನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತೆ. ಬೃಹತ್‌ ಒಟ್ಟುಗೂಡುವಿಕೆ ಅಂದರೆ, 10 ಹೆಜ್ಜೆ ಹಿಂದಿಟ್ಟು ಯಾವುದನ್ನು ತೊಲಗಿಸಲು ಪ್ರಯತ್ನಿಸುತ್ತಿದ್ದೇವೋ ಅದನ್ನು ಮತ್ತೆ ಆಮಂತ್ರಿಸಿದಂತೆ. ಕೋವಿಡ್‌ ಇನ್ನೂ ದೊಡ್ಡ ಬೆದರಿಕೆಯಾಗಿಯೇ ಇದೆ ಮತ್ತು ನಾವೆಲ್ಲರೂ ಕುಟುಂಬಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಜನ ನನ್ನ ಜನ ಕೂಡ ಹೌದು. ಹಾಗೂ ಜನಗಳು ಪೀಡಿತರಾಗುವ ಹಾಗೂ ನರಳುವ ಸುದ್ದಿ ಕೇಳಿದರೆ ಸಮವಾಗಿ ನನಗೂ ನೋವುಂಟು ಮಾಡುತ್ತದೆ’ ಎಂದಿದ್ದಾರೆ.

“ನಿಮ್ಮ ಶುಭಾಶಯಗಳು ನನಗೆ ಮುಖ್ಯವಾದದ್ದೇ. ಹಾಗೂ ನಾನು ಹೇಳಿದಂತೆ ಬೃಹತ್‌ ಸಂಖ್ಯೆಯಲ್ಲಿ ಬರುವ ನಿಮ್ಮನ್ನು ಕಾಣುವ ಸಂತೋಷ ಬೇರೆ ಯಾವುದೂ ಅದನ್ನು ಬದಲಾಯಿಸಲು ಆಗದು. ನಾನು ಖಚಿತವಾಗಿ ಹೇಳುತ್ತೇನೆ. ಬಹಳ ಬೇಗ ಆ ದಿನವೂ ಬರುತ್ತದೆ. ಹಾಗೂ ನಾವು ಮತ್ತೆ ಭೇಟಿಯಾಗುತ್ತೇವೆ. ಆದರೆ ಸದ್ಯಕ್ಕೆ, ನಿಮ್ಮಲ್ಲಿ ಕೋರುವುದೇನೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಒಟ್ಟುಗೂಡಬೇಡಿ, ಯಾವುದೇ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಗಳು ಇರುವುದಿಲ್ಲ. ಹೌದು. ಸಾಧ್ಯವಾದರೆ, ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ. ಅದು ನಿಮಗೆ ಒಳ್ಳೆಯದನ್ನು ಮಾತ್ರ ಮಾಡುತ್ತದೆ’ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ “ಈ ಅನೇಕ ವರ್ಷಗಳು ನನ್ನ ಪರವಾಗಿ ನಿಂತಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಒಂದೊಂದು ಸಲ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಾನು ಇರುವುದಿಲ್ಲ. ಆ ರೀತಿ ಇರಲು ಖಂಡಿತವಾಗಿಯೂ ಪ್ರಯತ್ನ ಮಾಡುತ್ತೇನೆ. ನಿಮ್ಮನ್ನೆಲ್ಲಾ ಹೆಚ್ಚು ಮನೋರಂಜಿಸಲು ಯತ್ನಿಸುವೆ. ಕೋವಿಡ್‌ ಜೊತೆ ಯುದ್ಧ ಮುಗಿದ ನಂತರ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವೆ’ ಎಂದು ಸುದೀಪ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next