ಅಸಂಘಟಿತ ವಲಯದಲ್ಲಿ ಅತಿ ಹೆಚ್ಚು ಉಪೇಕ್ಷೆಗೊಳಪಟ್ಟ ಕಾರ್ಮಿಕರೆಂದರೆ ಮನೆ ಕೆಲಸದವರು. ಸರಕಾರದ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ ಪ್ರಸ್ತುತ ಸುಮಾರು 47.5 ಲಕ್ಷ ಮನೆ ಕೆಲಸದವರು ಇದ್ದಾರೆ. ಆದರೆ ಈ ವಲಯವನ್ನು ಆಳವಾಗಿ ಅಧ್ಯಯನ ಮಾಡಿದವರ ಪ್ರಕಾರ
ಮನೆಗಳಲ್ಲಿ ಚಾಕರಿ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ ಸುಮಾರು ಕೋಟಿಯಷ್ಟಿದೆ. ಇವರಲ್ಲಿ ಮುಕ್ಕಾಲು ಪಾಲು ಮಹಿಳೆಯರು. ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ ಅವರು ಯಾವುದೇ ಸಚಿವಾಲಯ ಅಥವಾ ಕಾರ್ಮಿಕ ಕಾನೂನಿನ ಭದ್ರತೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಯಾವುದೇ ಕಾರ್ಮಿಕ ಕಲ್ಯಾಣ ಯೋಜನೆಗಳು ಅವರಿಗೆ ಅನ್ವಯವಾಗುವುದಿಲ್ಲ. ಅವರದ್ದೇ ಆದ ಯೂನಿಯನ್ ಕೂಡ ಇಲ್ಲ. ಇಷ್ಟಕ್ಕೂ ಅವರನ್ನು ಅಧಿಕೃತವಾಗಿ ಕಾರ್ಮಿಕರೆಂದೇ ಪರಿಗಣಿಸಲಾಗಿಲ್ಲ.
ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿರುವ ಈ ವಲಯಕ್ಕೆ ಕಾನೂನಿನ ರಕ್ಷಣೆ ನೀಡಲು ಇದೀಗ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಮನೆ ಕೆಲಸದವರಿಗೆ ಕನಿಷ್ಠ ವೇತನ, ವಿಮೆಯಂತಹ ಸಾಮಾಜಿಕ ಸುರಕ್ಷೆಗಳನ್ನು ಒದಗಿಸುವ ಸಲುವಾಗಿ ಸಚಿವಾಲಯ ರಾಷ್ಟ್ರೀಯ ನೀತಿಯೊಂದನ್ನು
ರೂಪಿಸುವ ಪ್ರಸ್ತಾವ ರೂಪಿಸಿದೆ. ರಾಜ ಮಹಾರಾಜರ ಕಾಲದಿಂದಲೇ ಮನೆ ಕೆಲಸಕ್ಕೆ ನೌಕರರನ್ನಿಟ್ಟುಕೊಳ್ಳುವ ಪರಿಪಾಠ ಬೆಳೆದು ಬಂದಿದೆ.
ಆಧುನಿಕ ದಿನಮಾನಗಳಲ್ಲಂತೂ ಮನೆ ಕೆಲಸದವರು ತೀರಾ ಅನಿವಾರ್ಯವಾಗಿದ್ದಾರೆ. ಗಂಡ ಹೆಂಡತಿ ಇಬ್ಬರು ದುಡಿಯುವ ಕುಟುಂಬಗಳಿಗೆ ಕೆಲಸದವರು ಇಲ್ಲದಿದ್ದರೆ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಕುಟುಂಬದಲ್ಲಿ ಮತ್ತು ಒಟ್ಟಾರೆಯಾಗಿ ಸಮಾಜದಲ್ಲಿ ಇಷ್ಟೆಲ್ಲ ಮುಖ್ಯ ಪಾತ್ರ ನಿಭಾಯಿಸುತ್ತಿದ್ದರೂ ಮನೆ ಕೆಲಸದವರಿಗೆ ಅವರ ಶ್ರಮಕ್ಕೆ ತಕ್ಕ ಸಂಭಾವನೆ ಸಿಗುತ್ತಿಲ್ಲ. ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆದಿದ್ದರೂ ಈ ಕಾರ್ಮಿಕರನ್ನು ಕಾನೂನಿನ ಚೌಕಟ್ಟಿಗೆ ತಂದು ರಕ್ಷಿಸುವ ಕೆಲಸ ಆಗಿಲ್ಲ. ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಸ್ವತ್ಛಗೊಳಿಸುವುದು, ಮಕ್ಕಳ ಲಾಲನೆ ಪಾಲನೆ, ತೋಟಗಾರಿಕೆ ಹೀಗೆ ಮನೆವಾರ್ತೆಯ ಪ್ರತಿಯೊಂದು ಕೆಲಸಕ್ಕೆ ಅವರು ಅನಿವಾರ್ಯ. ವಿಚಿತ್ರವೆಂದರೆ ಅವರು ಮಾಡುವ ಈ ಕೆಲಸಗಳನ್ನು ಬಹುತೇಕ ಸಂದರ್ಭದಲ್ಲಿ ಕೆಲಸಗಳೆಂದೇ ಪರಿಗಣಿಸಲಾಗುವುದಿಲ್ಲ.
ಹೀಗಾಗಿ ಅವರಿಗೆ ನಿಗದಿತ ವೇತನವಾಗಲಿ, ಸಮಯದ ಅವಧಿಯಾಗಲಿ ಇಲ್ಲ. ಮನೆ ಕೆಲಸದಾಳುಗಳ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ, ಶೋಷಣೆ ಇವೆಲ್ಲ ಮಾಮೂಲು ಸುದ್ದಿಗಳು. ಮನೆಯಿಂದ ಏನಾದರೊಂದು ವಸ್ತು ಕಾಣೆಯಾದರೆ ಮೊದಲ ಅನುಮಾನ ಬರುವುದೇ ಮನೆ ಕೆಲಸದವರ ಮೇಲೆ. ಹಾಗೆಂದು, ಮನೆ ಕೆಲಸದಾಳುಗಳ ಹಿತರಕ್ಷಣೆಗೆ ಪ್ರಯತ್ನಗಳೇ ಆಗಿಲ್ಲ ಎಂದಲ್ಲ. ಕೇರಳ ಮತ್ತು ತಮಿಳುನಾಡಿನಲ್ಲಿ ಅವರಿಗೆ ವೆಲ್ಫೆರ್ ಬೋರ್ಡ್ ಸ್ಥಾಪಿಸಲಾಗಿದೆ.
ಆದರೆ ಇದರಿಂದ ಮನೆ ಕೆಲಸದ ಕಾರ್ಮಿಕರಿಗೆ ಆಗಿರುವ ಪ್ರಯೋಜನ ಮಾತ್ರ ನಗಣ್ಯ. ರಾಜಸ್ಥಾನ, ಆಂಧ್ರ, ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಮನೆ ಕೆಲಸದವರಿಗೆ ವೇತನ ನಿಗದಿಪಡಿಸಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ 189ನೇ ಅಧಿವೇಶನವನ್ನು ಮನೆ ಕೆಲಸದವರ ಸಮಾವೇಶಕ್ಕೆ ಮೀಸಲಿರಿಸಲಾಗಿತ್ತು. ಭಾರತವೂ ಈ ಸಮಾವೇಶದ ಠರಾವುಗಳಿಗೆ ಅಂಕಿತ ಹಾಕಿದೆ. ಆದರೆ ಇನ್ನೂ ಅವುಗಳನ್ನು ಸ್ಥಿರೀಕರಿಸಿಲ್ಲ. ಮನೆ ಕೆಲಸದವರಿಗೆ ಇತರ ವಲಯ ಕಾರ್ಮಿಕರಿಗೆ ಸಮಾನವಾದ ವೇತನ ನೀಡುವ, ದಿನದ ಕೆಲಸದ ನಡುವೆ ವಿಶ್ರಾಂತಿ, ವಾರಕ್ಕೊಂದು ರಜೆ ನೀಡುವಂತಹ ಅಂಶಗಳು ಈ ಠರಾವಿನಲ್ಲಿದೆ. ಠರಾವು ಸ್ಥಿರೀಕರಿಸಿದರೆ ಭಾರತವೂ ಇವುಗಳನ್ನು ಜಾರಿಗೆ ತರುವ ಭಾಧ್ಯತೆಯನ್ನು ಹೊಂದಿದೆ.
ಎಲ್ಲ ರೀತಿಯಲ್ಲೂ ಶೋಷಣೆಗೆ ಒಳಗಾಗಿರುವ ಮನೆ ಕೆಲಸದವರಿಗಾಗಿ ಸರಕಾರ ರಾಷ್ಟ್ರೀಯ ನೀತಿ ರೂಪಿಸಲು ಮುಂದಾಗಿರುವುದು ಸಕಾರಾತ್ಮಕ ನಡೆ. ಮನೆ ಕೆಲಸದವರ ಸಂಬಳವನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕಬೇಕು, ಈ ಖಾತೆಗಳು ಆಧಾರ್‌ಗೆ ಲಿಂಕ್ ಆಗಿರಬೇಕೆಂಬ ಅಂಶಗಳು ಕರಡು ನೀತಿಯಲ್ಲಿದೆ. ಇದರಿಂದ ಕಡಿಮೆ ಸಂಬಳ ನೀಡಿ ವಂಚಿಸುವ ಮತ್ತು ಮನೆ ಕೆಲಸದಾಳುಗಳನ್ನು ಅಕ್ರಮ ಆಸ್ತಿ ಸಂಪಾದನೆಗೆ ಉಪಯೋಗಿಸಿಕೊಳ್ಳುವ ಅಕ್ರಮಗಳಿಗೆ ಕಡಿವಾಣ ಬೀಳಬಹುದು.