ಖಾನಾಪುರ: ಪಟ್ಟಣದ ಝೋಪಡಪಟ್ಟಿ ನಿವಾಸಿಗಳಿಗಾಗಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ 469 ಮನೆಗಳ ಮಂಜೂರಾತಿ ಪಡೆಯಲಾಗಿದೆ ಎಂದು ಶಾಸಕಿ ಡಾ| ಅಂಜಲಿ ನಿಂಬಾಳಕರ ನುಡಿದರು.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 360 ಚದುರ ಅಡಿ ಮನೆ ನಿರ್ಮಾಣಕ್ಕೆ 6.80 ಲಕ್ಷ ರೂ. ನೀಡಲಾಗುತ್ತದೆ. ಪಟ್ಟಣದ ಡೊಹರ ಗಲ್ಲಿ, ಹರಿಜನ ಗಲ್ಲಿ, ಶಾಹುನಗರ, ಡೊಂಬಾರಿ ಮಾಳದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಅನುದಾನ ದೊರೆಯಲಿದೆ. ಈ ಕುರಿತು ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ ಎಂದರು.
ತಾಲೂಕಿನ ತಾಲುಕಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಕೊಠಡಿಗಳ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ 15.12 ಕೋಟಿ ರೂ. ದೊರೆತಿದೆ. ಕಳೆದ ವರ್ಷ ಪ್ರವಾಹದಿಂದ ನಷ್ಟವಾದ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. 72 ಶಾಲೆಗಳಲ್ಲಿ 139 ಕೊಠಡಿ ನಿರ್ಮಿಸಲಾಗುವುದು. ಈ ವರ್ಷ 70 ಶಾಲಾ ಕೊಠಡಿಗಳು ಮತ್ತು 57 ಹೊಸ ಶಾಲೆಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ ಪಾರಿಶ್ವಾಡ ಖಾನಾಪುರ ರಸ್ತೆ ಕಾಮಗಾರಿಗೆ 20 ಕೋಟಿ, ಕರಂಬಾಳ ಚಾಪಗಾಂವ ರಸ್ತೆ 523.00 ಲಕ್ಷ ರೂಪಾಯಿ, ಜಾಂಬೋಠಿ ಚಾಪಗಾಂವ 569.00 ಲಕ್ಷ ರೂಪಾಯಿ, ಹತ್ತರಗುಂಜಿ-ಡುಕ್ಕರವಾಡಿ ಮತ್ತು ಮುಡೆವಾಡಿ ಕಾಟಗಾಳಿ ಗ್ರಾಮದಿಂದ ಮೊದೆಕೋಪ್ಪ ಗ್ರಾಮ ರಸ್ತೆಗೆ 712 ಲಕ್ಷ ರೂ. ಮಂಜೂರಾಗಿದೆ ಎಂದರು. ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ತಾಲೂಕಿನ ಕರಿಕಟ್ಟಿ ಗ್ರಾಮ ಆಯ್ಕೆ ಮಾಡಲಾಗಿದ್ದು ಆದರ್ಶ ಗ್ರಾಮದ ಎಲ್ಲ ಯೋಜನೆಗಳು ಈ ಗ್ರಾಮಕ್ಕೆ ಲಭಿಸಲಿವೆ ಎಂದು ತಿಳಿಸಿದರು.
ಮನೆ ಮನೆಗೆ ಜಲ ಜೀವನ ಮಿಶನ್ ಯೋಜನೆ ಅಡಿಯಲ್ಲಿ 58 ಗ್ರಾಮಗಳನ್ನು ಗುರುತಿಸಿದ್ದು, ಗಂಗೆ ಯೋಜನೆ ವೆಚ್ಚ 11 ಕೋಟಿ ಇದ್ದು ಸರ್ವೆ ನಂತರ ಇದು ಅಂತಿಮ ಹಂತದಲ್ಲಿ 25.00 ಕೋಟಿಯಾಗಲಿದೆ. ಏತ ನಿರಾವರಿ ಯೋಜನೆಗೆ 27.78 ಕೋಟಿ ಪ್ರಾಸ್ತಾವನೆಗೆ ಆಡಳಿತ ಮಂಜೂರಾತಿ ಸಿಕ್ಕಿದ್ದು, ಇಟಗಿ 7.22 ಕೋಟಿ, ಮಂಗೇನಕೋಪ್ಪ 2.60 ಕೋಟಿ, ಮುಗಳಿಹಾಳ 2.12 ಕೋಟಿ ಇದ್ದು ಒಟ್ಟು 15.71 ಕೋಟಿಯಾಗಲಿದೆ. ಖಾನಾಪುರ ಹೈಟೆಕ್ ಬಸ್ ನಿಲ್ದಾಣಕ್ಕೆ 7 ಕೋಟಿ ಮಂಜೂರಾಗಿದ್ದು, ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದೆ. ಮಳೆ ಪ್ರವಾಹದಲ್ಲಿ ಹಾನಿಗಿಡಾದ 16 ಅಂಗನವಾಡಿ ಕಟ್ಟಡಗಳಿಗೆ ನಬಾರ್ಡ್ ಅಡಿಯಲ್ಲಿ ಪ್ರತಿ ಕಟ್ಟಡಕ್ಕೆ 17 ಲಕ್ಷದಂತೆ ಒಟ್ಟು 2.72 ಕೋಟಿ ದೊರೆತಿದೆ. ಹೆಸ್ಕಾಂ ಯೋಜನೆಯಲ್ಲಿ ಕೊಡಚವಾಡ 110ಕೆವಿಎ ಸಬ್‌ಡಿವಿಜನ್ ನಿರ್ಮಾಣಕ್ಕೆ 10 ಕೋಟಿ, ಹಲಸಿ 33 ಕೆವಿಎ ಕೇಂದ್ರ ನಿರ್ಮಾಣಕ್ಕೆ 4 ಕೋಟಿ, ಬೈಲೂರ 33 ಕೆವಿಎ ಸಬ್ ಸ್ಟೇಶನ್‌ಗೆ 4 ಕೋಟಿ ರೂ. ಮಂಜೂರಾತಿ ದೊರಕಿದೆ. ಮಲೆನಾಡ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ಮತ್ತು ಪೇವರ್ ನಿರ್ಮಾಣಕ್ಕೆ ಅವರೊಳ್ಳಿ ಮತ್ತು ಬೆಡರಹಟ್ಟಿ ಪರಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಯೋಜನೆ ಅಡಿಯಲ್ಲಿ 17 ಲಕ್ಷ ರೂ.ಅನುಮೋದನೆ ದೊರಕಿದೆ. ಜಾಂಬೋಟಿಯಿಂದ ಚಿಗುಳಿ ಸಂಪರ್ಕ ರಸ್ತೆಗೆ 73.00 ಲಕ್ಷ ರೂಪಾಯಿ ಮಂಜುರಾತಿ ದೊರಕಿದೆ ಎಂದರು.