Advertisement

460 ಮೀ. ವೈಟ್‌ಟಾಪಿಂಗ್‌ ರಸ್ತೆ ಇಂದು ಸಂಚಾರಕ್ಕೆ ಮುಕ್ತ

12:35 PM Dec 25, 2017 | Team Udayavani |

ಬೆಂಗಳೂರು: ನಾಗವಾರ ಹೊರವರ್ತುಲ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಹೆಣ್ಣೂರು ರಸ್ತೆಯಿಂದ ಬಾಬುಸಪಾಳ್ಯವರೆಗೆ ಕಾಮಗಾರಿ ಪೂರ್ಣಗೊಂಡಿರುವ 460 ಮೀ. ವೈಟ್‌ಟಾಪಿಂಗ್‌ ರಸ್ತೆಯನ್ನು ಸೋಮವಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

Advertisement

ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಏಕಕಾಲದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡ ಪರಿಣಾಮ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕೈಗೊಳ್ಳದಿರಲು, ಜತೆಗೆ ಕಾಮಗಾರಿ ಪೂರ್ಣಗೊಂಡ ರಸ್ತೆಗಳನ್ನು ಹಂತ ಹಂತವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಿದೆ. 

ನಾಗವಾರ ಹೊರವರ್ತುಲ ರಸ್ತೆಯಲ್ಲಿ ಸುಮಾರು 2.7 ಕಿ.ಮೀ. ರಸ್ತೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮೊದಲ ಹಂತವಾಗಿ ಹೆಣ್ಣೂರು ರಸ್ತೆಯಿಂದ ಬಾಬುಸಪಾಳ್ಯವರೆಗೆ ಪೂರ್ಣಗೊಂಡಿರುವ ರಸ್ತೆ ಸೋಮವಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಜತೆಗೆ ಇದೇ ಮಾರ್ಗದಲ್ಲಿ ಪೂರ್ಣಗೊಂಡಿರುವ 900 ಮೀಟರ್‌ ರಸ್ತೆಯೂ ಸಹ ಮುಂದಿನ ಮೂರು ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಪಾಲಿಕೆಯ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ಕಾಮಗಾರಿ ತಡವಾಗಲು ಕಾರಣವೇನು?: ವೈಟ್‌ಟಾಪಿಂಗ್‌ ಕಾಮಗಾರಿಗಾಗಿ ಬಳಸಲಾಗುತ್ತಿರುವ ಕಾಂಕ್ರಿಟ್‌ ಕ್ಯೂರಿಂಗ್‌ಗೆ 15 ದಿನಗಳು ಬೇಕಾಗುತ್ತದೆ. ಆದರೆ, ಸದ್ಯ ಕಾಮಗಾರಿ ನಡೆಸುತ್ತಿರುವ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ರಸ್ತೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕ್ಯೂರಿಂಗ್‌ ಅವಧಿಯನ್ನು 28 ದಿನಗಳಿಗೆ ಹೆಚ್ಚಿಸಲಾಗಿದ್ದು, ಸೋಮವಾರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಪಾಲಿಕೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಮಾಹಿತಿ ನೀಡಿದ್ದಾರೆ. 

ದಟ್ಟಣೆ ರಸ್ತೆಗಳಲ್ಲಿ ಕಾಮಗಾರಿ ಸ್ಥಗಿತ: ತೀವ್ರ ವಾಹನ ಸಂಚಾರವಿರುವ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ದಟ್ಟಣೆ ಜಾಸ್ತಿಯಾಗುವ ಸಾಧ್ಯತೆಯಿದ್ದು, ವಾಹನಸವಾರರು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸದ್ಯ ಕೆಲಸ ಆರಂಭಿಸಿರುವ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರಮುಖ ರಸ್ತೆಗಳಲ್ಲಿನ ಕಾಮಗಾರಿ ಸ್ಥಗಿತಗೊಳಿಸಲಾಗುವುದು. ನಂತರ ಕಡಿಮೆ ದಟ್ಟಣೆಯಿರುವ, ಪರ್ಯಾಯ ಮಾರ್ಗಗಳಿರುವ ಹಾಗೂ ವಾರ್ಡ್‌ಗಳಲ್ಲಿ ರಸ್ತೆಗಳಲ್ಲಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Advertisement

9 ಕಿ.ಮೀ. ಸಂಚಾರಕ್ಕೆ ಮುಕ್ತ: ಮೊದಲ ಹಂತದಲ್ಲಿ ಮೈಸೂರು ರಸ್ತೆ, ಹೊಸೂರು ರಸ್ತೆ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ ಮೆಟ್ರೊ ಸ್ಟೇಷನ್‌ ಹಾಗೂ ಕೋರಮಂಗಲ 20ನೇ ಮುಖ್ಯರಸ್ತೆಯಲ್ಲಿ ಒಟ್ಟು 9 ಕಿ.ಮೀ. ಉದ್ದದ ವೈಟ್‌ಟಾಪಿಂಗ್‌ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಜನವರಿ ಎರಡನೇ ವಾರದೊಳಗೆ ಐದೂ ರಸ್ತೆಗಳ ಒಟ್ಟು 9 ಕಿ.ಮೀ. ಉದ್ದದ ರಸ್ತೆಯನ್ನು ಹಂತ ಹಂತವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕೈಬಿಡುತ್ತಿರುವುದೇಕೆ?: ನಗರದ ಪ್ರಮುಖ ಐದು ರಸ್ತೆಗಳಲ್ಲಿ ನಡೆಸುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಎಲ್ಲೆಡೆ ದಟ್ಟಣೆ ಸಮಸ್ಯೆಯಿದ್ದರೆ, ಅದು ಜನರಲ್ಲಿ ಸರ್ಕಾರದ ವಿರುದ್ಧ ನಕಾರಾತ್ಮಕ ಭಾವನೆ ಮೂಡಿಸುವ ಸಾಧ್ಯತೆಯಿದೆ.ಹೀಗಾಗಿ ಸದ್ಯ ಪೂರ್ಣಗೊಂಡಿರುವ ರಸ್ತೆಗಳನ್ನು ಶೀಘ್ರ ಸಾರ್ವಜನಿಕರಿಗೆ ಮುಕ್ತಗೊಳಿಸಿ, ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಸೂಚಿಸಿದ್ದಾರೆ ಎಂಬ ಮಾತೂ ಕೇಳಿಬಂದಿದೆ. 

ಪಾಲಿಕೆಯ ಅಧಿಕಾರಿಗಳು ಪೂರ್ವ ಸಿದ್ಧತೆಯಿಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಪರಿಣಾಮ ತೀವ್ರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
-ಆರ್‌.ಸಂಪತ್‌ರಾಜ್‌, ಮೇಯರ್‌ 

ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಕಾಮಗಾರಿ ನಡೆಸುವುದರಿಂದ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚು ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಯೋಜನೆಯ ಕೊನೆಯಲ್ಲಿ ಕಾಮಗಾರಿ ನಡೆಸಲು ನಿರ್ಧರಿಸಿದ್ದು, ನಗರದ ಒಳ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಮೊದಲ ಹಂತದ ರಸ್ತೆಗಳ ವಿವರ
ರಸ್ತೆ    ಕಾಮಗಾರಿ ಪೂರ್ಣಗೊಂಡ ರಸ್ತೆ ಉದ್ದ (ಕಿ.ಮೀ ಗಳಲ್ಲಿ)

-ವಿಜಯನಗರ ಮೆಟ್ರೊ ಸ್ಟೇಷನ್‌    0.47
-ನಾಗವಾರ ಹೊರವರ್ತುಲ ರಸ್ತೆ    2.68
-ಹೊಸೂರು ರಸ್ತೆ    2.02
-ಮೈಸೂರು ರಸ್ತೆ    2.33
-ಕೋರಮಂಗಲ 20ನೇ ಮುಖ್ಯರಸ್ತೆ    0.59
-ಒಟ್ಟು    8.11

Advertisement

Udayavani is now on Telegram. Click here to join our channel and stay updated with the latest news.

Next