Advertisement

46 ಕೋ.ರೂ. ಅನುದಾನ, 6 ಕೋ.ರೂ. ಸಿಎಂ ಪರಿಹಾರ ನಿಧಿ ವಿತರಣೆ: ಐವನ್‌

10:51 AM Jun 24, 2020 | mahesh |

ಮಂಗಳೂರು: ವಿಧಾನ ಪರಿಷತ್‌ ಸದಸ್ಯನಾಗಿ 6 ವರ್ಷಗಳ ಸೇವಾವಧಿ ಮಂಗಳವಾರ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ವಿವಿಧ ನಿಗಮ, ಯೋಜನೆ, ಅಭಿವೃದ್ಧಿ ಕಾರ್ಯಗಳಡಿ 46 ಕೋಟಿ ರೂ. ಅನುದಾನವನ್ನು ಸರಕಾರದಿಂದ ಪಡೆದು ಜನಸೇವೆಗೆ ಸದ್ಬಳಕೆ ಮಾಡಲಾಗಿದೆ ಎಂದು ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 1,600ಕ್ಕೂ ಅಧಿಕ ಅನಾರೋಗ್ಯ ಪೀಡಿತ ಅರ್ಜಿದಾರರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಡಿ 6.62 ಕೋಟಿ ರೂ. ವಿತರಿಸಲಾಗಿದೆ. 2014ರಿಂದ ಈವರೆಗೆ ಶಾಸನ ಸಭೆಯ ಒಂದೂ ಸಭೆಗೂ ಗೈರು ಹಾಜರಾಗದೆ ಜನರ ಪರ ಧ್ವನಿ ಎತ್ತಿದ ತೃಪ್ತಿ ನನಗಿದೆ ಎಂದರು.

Advertisement

ಸೌರಶಕ್ತಿ ಘಟಕ
ಶಾಸಕರ ನಿಧಿಯಿಂದ ಸರಕಾರಿ, ಅನುದಾನಿತ 25 ಶಾಲೆಗಳಿಗೆ 3 ಕಿಲೋ ವ್ಯಾಟ್‌ನ ಸೌರಶಕ್ತಿ ಘಟಕಗಳನ್ನು ಒದಗಿಸಲಾಗಿದೆ. ಪೆರಾಬೆಯ ಎಂಡೋ ಪೀಡಿತರ ಮನೆಗಳಿಗೆ ಸೌರಶಕ್ತಿ ನೀಡಲಾಗಿದೆ. ಪತ್ನಿ ಡಾ| ಕವಿತಾ ಡಿ’ಸೋಜಾ ಅವರ ಸಹಾಯದಿಂದ 63 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋ ಜಿಸಿ, 350ಕ್ಕೂ ಅಧಿಕ ಉಚಿತ ಶಸ್ತ್ರಚಿಕಿತ್ಸೆ ಗಳನ್ನು ನಡೆಸಲಾಗಿದೆ. 3,500ಕ್ಕೂ ಅಧಿಕ ಜನ ರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ವಿವಿಧೆಡೆ 68 ಸುಸಜ್ಜಿತ ರಿಕ್ಷಾ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ನಿಟ್ಟಿನಲ್ಲಿ ಮಾಡಿದ ಪ್ರಯತ್ನದ ಫ‌ಲವಾಗಿ 2019-20ನೇ ಬಜೆಟ್‌ನಲ್ಲಿ 200 ಕೋಟಿ ರೂ. ಅನುದಾನ ದೊಂದಿಗೆ ನಿಗಮ ಸ್ಥಾಪನೆಗೆ ಸರಕಾರ ಕ್ರಮ ಕೈಗೊಂಡಿದೆ ಎಂದರು.
ಮುಂದೆ ಜನರ ಸರಕಾರಿ ಸೇವೆ ಗಳನ್ನು ಮನೆಯ ಕಚೇರಿ ಮೂಲಕವೇ ಮುಂದುವರಿಸಲಾಗುವುದು. ಪಕ್ಷ ವನ್ನು ಬಲಿಷ್ಠವಾಗಿಸಲು ಹೆಚ್ಚಿನ ಸಮಯವನ್ನು ನೀಡಲಿದ್ದೇನೆ. ಜತೆಗೆ ವಕೀಲ ವೃತ್ತಿಯನ್ನೂ ಮುಂದುವರಿಸುವುದಾಗಿ ಐವನ್‌ ಹೇಳಿದರು.

ಶಾಸಕ ಯು. ಟಿ. ಖಾದರ್‌, ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್‌, ಎಂ. ಶಶಿಧರ ಹೆಗ್ಡೆ, ಮನುರಾಜ್‌, ನಾಗೇಂದ್ರ ಕುಮಾರ್‌, ನಝೀರ್‌ ಬಜಾಲ್‌, ಸಬಿತಾ ಮಿಸ್ಕಿತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next