Advertisement

ಕಲ್ಯಾಣ ಕಾರ್ಯಕ್ರಮ ಪ್ರಚಾರಕ್ಕೆ 4.50 ಕೋಟಿ!

11:56 AM Jul 18, 2017 | Team Udayavani |

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದವರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ರೂಪಿಸಿರುವ ಕಲ್ಯಾಣ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಬರೊಬ್ಬರಿ 4.50 ಕೋಟಿ ರೂ. ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ.

Advertisement

ಪಾಲಿಕೆಯಿಂದ ಕಲ್ಯಾಣ ಕಾರ್ಯಕ್ರಮಗಳಿಗೆ 718 ಕೋಟಿ ರೂ. ಮೀಸಲಿಟ್ಟು ಯೋಜನೆ ರೂಪಿಸಿದ್ದರೂ ಅವುಗಳು ಜನರಿಗೆ ತಲುಪದ ಹಿನ್ನೆಲೆಯಲ್ಲಿ ಪ್ರಚಾರದ ಮೂಲಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಮುಟ್ಟಿಸಲು ಪಾಲಿಕೆ ಯೋಜನೆ ರೂಪಿಸಿದೆ.

ಆ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್‌ಗಳ ಮೇಲೆ, ಬಸ್‌ ತಂಗುದಾಣಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಜತೆಗೆ, ಜಾಹೀರಾತು ಪ್ರದರ್ಶನ ವಾಹನಗಳ ಮೂಲಕವೂ ಪ್ರಚಾರ ಮಾಡುವ ಮೂಲಕ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ರವಾನಿಸಲು ಪಾಲಿಕೆ ಮುಂದಾಗಿದೆ.

ಮಾಹಿತಿ ಕೊರತೆ: ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿರುವುದರಿಂದ ಕಾರ್ಯಕ್ರಮಗಳು ಫ‌ಲಾನುಭವಿಗಳಿಗೆ ತಲುಪುತ್ತಿಲ್ಲ. ಇದರಿಂದ ಪ್ರತಿ ವರ್ಷ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಫ‌ಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ನಗರದ ಬಡ ವರ್ಗದವರಿಗೆ ರೂಪಿಸಿರುವ ಕಾರ್ಯಕ್ರಮಗಳ ಮಾಹಿತಿ ನೀಡಲು ಪ್ರಚಾರ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ.

ಜಾಹೀರಾತು: ಸಾರ್ವಜನಿಕ ಸ್ಥಳಗಳು, ಬಸ್‌ಗಳು, ಬಸ್‌ ಶೆಲ್ಟರ್‌ ಹಾಗೂ ಜಾಹೀರಾತು ಪ್ರದರ್ಶನ ವಾಹನಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಅದಕ್ಕಾಗಿ ಒಟ್ಟು 4.50 ಕೋಟಿ ರೂ. ವೆಚ್ಚ ಮಾಡಲು ಪಾಲಿಕೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಆದರೆ ಟೆಂಡರ್‌ ಆಹ್ವಾನಿಸದೆ ಪ್ರಚಾರದ ಹೊಣೆಯನ್ನು ಒಂದೇ ಸಂಸ್ಥೆಗೆ ನೀಡಿರುವ ಬಗ್ಗೆ ವಿರೋಧವಿದ್ದು, ಮತ್ತೂಮ್ಮೆ ಪರಿಶೀಲಿಸಿ ಖಾಸಗಿ ಸಂಸ್ಥೆಗೆ ನೀಡಬೇಕೇ ಅಥವಾ ವಾರ್ತಾ ಇಲಾಖೆಯ ಮೂಲಕ ಜಾಹೀರಾತು ನೀಡಬೇಕೇ ಎಂಬ ಕುರಿತು ತೀರ್ಮಾನ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

Advertisement

1500 ಬಸ್‌ಗಳ ಮೇಲೆ ಜಾಹೀರಾತು: ಕಲ್ಯಾಣ ಕಾರ್ಯಕ್ರಮಗಳ ಕುರಿತು ಬಿಎಂಟಿಸಿಯ 1500 ಬಸ್‌ಗಳ ಮೇಲೆ ಜಾಹೀರಾತು ಪ್ರಕಟಿಸಲು ಪಾಲಿಕೆಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಜತೆಗೆ ಬಸ್‌ ತಂಗುದಾಣಗಳಲ್ಲಿಯೂ ಜಾಹೀರಾತುಗಳನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಒಂದು ಬಸ್‌ಗೆ ಜಾಹೀರಾತು ಅಳವಡಿಸಲು 12,300 ರೂ.ನಂತೆ 1500 ಬಸ್‌ಗಳಿಗೆ 1.84 ಕೋಟಿ ರೂ. ವೆಚ್ಚವಾಗಲಿದ್ದು, ಒಟ್ಟು ಮೂರು ತಿಂಗಳು ಜಾಹೀರಾತು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಜಾಹೀರಾತು ನೀಡುವ ಕಡತಕ್ಕೆ ಈಗಾಗಲೇ ಬಿಬಿಎಂಪಿ ಆಯುಕ್ತರು ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಒಪ್ಪಿಗೆ ಸೂಚಿಸಿದೆ. ಆದರೆ ಪ್ರಚಾರ ಕಾರ್ಯಕ್ಕೆ ಇನ್ನಷ್ಟು ಅನುದಾನದ ಅಗತ್ಯವಿರುವ ಹಿನ್ನೆಲೆಯಲ್ಲಿ ಅನುದಾನ ಹೆಚ್ಚಿಸುವಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಕೋರಲಾಗಿದ್ದು, ಆನಂತರದಲ್ಲಿ ಕೌನ್ಸಿಲ್‌ ಮುಂದೆ ಮಂಡಿಸಿ ಅನುಮೋದನೆ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ನಗರದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ ಪಾಲಿಕೆಯಿಂದ ರೂಪಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅವರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲು 4.50 ಕೋಟಿ ರೂ. ವೆಚ್ಚದಲ್ಲಿ ಜಾಹೀರಾತು ನೀಡಲು ತೀರ್ಮಾನಿಸಲಾಗಿದೆ. ಆದರೆ, ಜಾಹೀರಾತು ಯಾರ ಮೂಲಕ ನೀಡಬೇಕು ಎಂಬುದರ ಕುರಿತು ಕೆಲ ಗೊಂದಲಗಳಿದ್ದು, ಶೀಘ್ರ ಅವುಗಳನ್ನು ಪರಿಹರಿಸಲಾಗುವುದು.
-ಜಿ. ಪದ್ಮಾವತಿ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next