Advertisement

ಕಲಬುರಗಿ ಒಕ್ಕೂಟದಿಂದ ಎಮ್ಮೆ ಹಾಲು ಲೀಟರ್‌ಗೆ 45 ರೂ.ಪಾವತಿ!

09:29 PM Jun 10, 2023 | Team Udayavani |

ಕಲಬುರಗಿ: ಇಲ್ಲಿನ ಕಲಬುರಗಿ-ಬೀದರ್‌-ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಎಮ್ಮೆ ಹಾಲಿಗೆ ರಾಜ್ಯದಲ್ಲೇ ಹೆಚ್ಚಿನ ದರ ನಿಗದಿ ಮಾಡಿದೆ ಎಂದು ಒಕ್ಕೂಟದ ಅಧ್ಯಕ್ಷ ಆರ್‌.ಕೆ.ಪಾಟೀಲ ತಿಳಿಸಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಮ್ಮೆ ಹಾಲಿಗೆ ಪ್ರತಿ ಲೀಟರ್‌ಗೆ  9.20ರೂ. ಹೆಚ್ಚಿಗೆ ಮಾಡಿ ಒಟ್ಟಾರೆ 45ರೂ.ನಂತೆ ಲೀಟರ್‌ ಹಾಲು ಪಡೆಯಲಾಗುವುದು. ರಾಜ್ಯ ಸರ್ಕಾರದ 5ರೂ. ಪ್ರೋತ್ಸಾಹಧನ ಸೇರಿ ಪ್ರತಿ ಲೀಟರ್‌ಗೆ 50 ರೂ. ದರ ರೈತನಿಗೆ ದೊರಕುತ್ತದೆ. ಒಟ್ಟಾರೆ ಕೊರತೆ ಹಾಲನ್ನು ನಿಭಾಯಿಸಲು ಅದರಲ್ಲೂ ಎಮ್ಮೆ ಹೈನೋದ್ಯಮ ಉತ್ತೇಜಿಸಲು ಹಾಲಿನ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಸ್ತುತ ಹಾಲು ಉತ್ಪಾದಕರ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಲೀಟರ್‌ಗೆ 36.80 ರೂ. ನೀಡಲಾಗುತ್ತಿದೆ. ಅದೇ ರೀತಿ ಹಾಲು ಉತ್ಪಾದಕರಿಗೆ 35.76ರೂ. ನೀಡಲಾಗುತ್ತಿದೆ. ಇದಕ್ಕೆ 9.20ರೂ. ಪ್ರತಿ ಲೀಟರ್‌ಗೆ ದರ ಹೆಚ್ಚಿಸಲಾಗಿದೆ. ಒಟ್ಟಾರೆ ಸಂಘಗಳಿಗೆ ಲೀಟರ್‌ಗೆ 46ರೂ. ದರ ದೊರಕಿದರೆ, ಹಾಲು ಉತ್ಪಾದಕರಿಗೆ 45ರೂ. ದರ ದೊರಕಲಿದೆ. ಲೀಟರ್‌ ಎಮ್ಮೆ ಹಾಲಿಗೆ ಹೆಚ್ಚಿಸಲಾಗಿರುವ 9.20ರೂ. ದರ ಜೂನ್‌ 11ರಿಂದ ಜಾರಿಗೆ ಬರಲಿದೆ ಎಂದು ವಿವರಿಸಿದರು.

ಕಲಬುರಗಿ, ಬೀದರ್‌-ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದಿಂದ 44 ಸಾವಿರ ಲೀಟರ್‌ ಹಾಲು ಉತ್ಪಾದಿಸುತ್ತಿದ್ದು, ಕೊರತೆ ಇರುವ 75 ಸಾವಿರ ಲೀಟರ್‌ ಹಾಲಿನ ಪೈಕಿ 40 ಸಾವಿರ ಲೀಟರ್‌ ಹಾಲನ್ನು ಶಿವಮೊಗ್ಗದಿಂದ ತರಿಸಿಕೊಂಡು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಎಮ್ಮೆಗೆ ಹೆಚ್ಚಿನ ದರ ನೀಡುವ ಮುಖಾಂತರ ಇನ್ನಷ್ಟು ಹಾಲಿನ ಉತ್ಪಾದನೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈಗ ಕೇವಲ 2500 ಲೀಟರ್‌ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದ್ದು, ಇದನ್ನು ಕನಿಷ್ಠ 10 ಸಾವಿರ ಲೀಟರ್‌ ಹಾಲು ಉತ್ಪಾದಿಸಲು ಗುರಿ ಹೊಂದಲಾಗಿದೆ ಎಂದರು.

ನಾವು ಗುಣಮಟ್ಟದ ಹಾಲನ್ನೇ ಪಡೆಯುತ್ತಿರುವುದರಿಂದ ಒಕ್ಕೂಟಕ್ಕೆ ಸ್ವಲ್ಪ ಕಡಿಮೆ ಹಾಲು ಪೂರೈಕೆಯಾಗುತ್ತಿದೆ ಎಂದು ಊಹಿಸಲಾಗಿದೆ. ಜತೆಗೆ ನಿಷ್ಕಿÅಯ ಹಾಲು ಉತ್ಪಾದಕ ಸಂಘಗಳನ್ನು ರದ್ದುಗೊಳಿಸಲಾಗಿದೆ. ಆದರೆ ತಾವು ತಿರಸ್ಕರಿಸಿದ ಹಾಲನ್ನು ಖಾಸಗಿಯವರು ಪಡೆದು ಅದನ್ನು ಗ್ರಾಹಕರಿಗೆ ಪೂರೈಸಿ ಆರೋಗ್ಯದ ಜತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಫ್ಯಾಟ್‌ 6.00 ಹಾಗೂ ಎಸ್‌.ಎನ್‌.ಎಫ್‌ 9.00 ಇರಬೇಕು. ಆದರೆ ಭಾರತೀಯ ಆಹಾರ ಸುರûಾ ಪ್ರಾಧಿಕಾರ ಪ್ರಕಾರ ಇದು ಆಹಾರ ಗುಣಮಟ್ಟತೆ ನಿಯಮ ಉಲ್ಲಂಘನೆಯಾಗಿದೆ. ಈ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಖಾಸಗಿ ಹಾಗೂ ಪೂರೈಕೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾವು ಅಧ್ಯಕ್ಷರಾದ ನಂತರ ಒಕ್ಕೂಟ ಲಾಭದತ್ತ ದೃಢ ಹೆಜ್ಜೆ ಹಾಕುತ್ತಿದೆ. 2018-19 ಸಾಲಿನಲ್ಲಿ 60ಲಕ್ಷ ರೂ. ಲಾಭ ಹೊಂದಿದ್ದರೆ, 2020ರಲ್ಲಿ 14.96ಲಕ್ಷ ರೂ., 2021ರಲ್ಲಿ 1.82ಕೋಟಿ ರೂ., 2022ರಲ್ಲಿ 53ಲಕ್ಷ ರೂ., ಪ್ರಸಕ್ತವಾಗಿ 48 ಲಕ್ಷ ರೂ. ಲಾಭದತ್ತ ದೃಢ ಹೆಜ್ಜೆ ಹಾಕಿದೆ. ಬಂದ ಲಾಭವನ್ನು ಗ್ರಾಹಕರಿಗೆ ಕೊಡಲಾಗುತ್ತಿದೆ. 10 ಲಕ್ಷ ಹುಲ್ಲಿನ ಕಾಂಡಗಳನ್ನು ವಿತರಿಸಲಾಗಿದೆ. ಅದೇ ರೀತಿ ಮಹಿಳಾ ಹಾಲು ಉತ್ಪಾದಕರ ಸಂಘಗಳಿಗೆ 80ಲಕ್ಷ ರೂ. ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಒಟ್ಟಾರೆ ಒಕ್ಕೂಟದ ವ್ಯಾಪ್ತಿಯಲ್ಲಿ ಕಲಬುರಗಿ 164, ಬೀದರ್‌ 199, ಯಾದಗಿರಿ ಜಿಲ್ಲೆಯಲ್ಲಿ 15 ಹಾಲು ಉತ್ಪಾದಕರ ಸಂಘಗಳು ಸೇರಿ 378 ಕ್ರಿಯಾಶೀಲವಾಗಿವೆ. ಕಳೆದ ಆರು ತಿಂಗಳಿಂದ ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಈರಣ್ಣ ಝಳಕಿ ಹಾಜರಿದ್ದರು.

ಯುವಕರು ಹತ್ತಿಪ್ಪತ್ತು ಸಾವಿರ ರೂ.ಗೆ ಅಲ್ಲಲ್ಲಿ ದುಡಿಯುವ ಬದಲು ಎರಡು ಆಕಳು, ಎರಡೆಮ್ಮೆ ಸಾಕಿದರೆ ಜೀವನ ಸಮೃದ್ಧ ಹಾಗೂ ಸ್ವಾಭಿಮಾನದಿಂದ ಮುನ್ನಡೆಸಬಹುದು. ಯುವಕರು ಮುಂದೆ ಬಂದಲ್ಲಿ ಬ್ಯಾಂಕ್‌ಗಳಿಂದ ಆರ್ಥಿಕ ಸಹಾಯ ಕಲ್ಪಿಸಿ ಆರ್ಥಿಕ ಬಲ ತುಂಬಲು ಕಲಬುರಗಿ, ಬೀದರ್‌-ಯಾದಗಿರಿ ಹಾಲು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸದಾ ಬದ್ಧವಿದೆ.

-ಆರ್‌.ಕೆ.ಪಾಟೀಲ, ಅಧ್ಯಕ್ಷ, ಕಲಬುರಗಿ ಬೀದರ್‌-ಯಾದಗಿರಿ ಹಾಲು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next