Advertisement

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

02:36 PM Sep 30, 2024 | Team Udayavani |

ಕನ್ನಡದಲ್ಲಿ ಮಲ್ಟಿಸ್ಟಾರರ್‌ ಸಿನಿಮಾಗಳು ತಯಾರಾಗೋದು ಕಡಿಮೆ. ಆದರೆ, ಇಲ್ಲೊಂದು ಚಿತ್ರ ಬಿಗ್‌ ಬಜೆಟ್‌ನಲ್ಲಿ ತಯಾರಾಗಿದೆ. ಅದು “45′. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ (Arjun Janya) ಅವರ ಚೊಚ್ಚಲ ನಿರ್ದೇಶನದ ಮಲ್ಟಿಸ್ಟಾರರ್‌ ಚಿತ್ರ “45′ ಈಗ ಚಿತ್ರೀಕರಣ ಪೂರ್ಣಗೊಳಿಸಿದೆ. ಶಿವರಾಜ್‌ ಕುಮಾರ್‌ (Shivarajkumar), ಉಪೇಂದ್ರ (Upendra) ಹಾಗೂ ರಾಜ್‌ ಬಿ ಶೆಟ್ಟಿ (Raj B Shetty) ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಸೂರಜ್‌ ಪ್ರೊಡಕ್ಷನ್ಸ್‌ನಡಿ ಉಮಾ ರಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಶಿವರಾಜ್‌ ಕುಮಾರ್‌, “ಈ ಚಿತ್ರದಲ್ಲಿ ನಾವು ಮೂವರು ನಟಿಸಿದ್ದೇವೆ. ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಉಪೇಂದ್ರ ಅವರ ಜೊತೆ ನಟಿಸಲು ನಾನು ಯಾವಾಗಲೂ ಸಿದ್ಧ. ರಾಜ್‌ ಬಿ ಶೆಟ್ಟಿ ಅವರ ಜೊತೆಗೆ ನಟಿಸಿದ್ದು ಸಂತೋಷವಾಗಿದೆ. ಅರ್ಜುನ್‌ ಜನ್ಯ ಅವರ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲಿಕ್ಕೆ ಆಗಲ್ಲ. ಅಷ್ಟು ಅದ್ಭುತ ನಿರ್ದೇಶನ ಅವರದು. ಅಷ್ಟೇ ಅದ್ಧೂರಿಯಾಗಿ ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಾಹಸ ಸನ್ನಿವೇಶಗಳು ಅದ್ಭುತವಾಗಿವೆ. 45 ಇಡೀ ಭಾರತೀಯರೆ ಮೆಚ್ಚುವಂತಹ ಆ್ಯಕ್ಷನ್‌ ಚಿತ್ರವಾಗಲಿದೆ’ ಎಂದರು.

ಉಪೇಂದ್ರ ಕೂಡಾ ಅರ್ಜುನ್‌ ಜನ್ಯಾ ಅವರ ತಯಾರಿಯಿಂದ ಖುಷಿಯಾಗಿದ್ದಾರೆ. “ಕಥೆಯನ್ನು ಅನಿಮೇಷನ್‌ ಮೂಲಕ ಹೇಳಿದ್ದನ್ನು ನಾನು ಹಾಲಿವುಡ್‌ ನ‌ಲ್ಲಿ ಕೇಳಿದ್ದೆ. ಆದರೆ ಅರ್ಜುನ್‌ ಜನ್ಯ ಅವರು ಕನ್ನಡದಲ್ಲೇ ಅದನ್ನು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಅನಿಮೇಷನ್‌ ಮೂಲಕ ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನೂ ಮಾಡಿದ್ದಾರೆ. ಅರ್ಜುನ್‌ ಜನ್ಯ ಅವರು ಅಂದುಕೊಂಡಂತೆ ಚಿತ್ರ ಮಾಡಲು ನಿರ್ಮಾಪಕ ರಮೇಶ್‌ ರೆಡ್ಡಿ ಸಾಥ್‌ ನೀಡಿದ್ದಾರೆ. ಶಿವಣ್ಣ ಹಾಗೂ ರಾಜ್‌ ಬಿ ಶೆಟ್ಟಿ ಅವರ ಜೊತೆಗೆ ಅಭಿನಯಿಸಿದ್ದು ಸಂತಸವಾಗಿದೆ’ ಎಂದರು.

ರಾಜ್‌ ಬಿ ಶೆಟ್ಟಿ ಕೂಡಾ ಈ ಸಿನಿಮಾದಲ್ಲಿ ನಟಿಸಿದ ಅನುಭವ ಹಂಚಿಕೊಂಡರು. 45 ಕನ್ನಡಿಗರು ಹೆಮ್ಮೆಯ ಪಡುವ ಸಿನಿಮಾ ಅಂತ ಕನ್ನಡಿಗನಾಗಿ ಹೇಳುತ್ತೇನೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೂ ಹೆಮ್ಮೆಯಿದೆ ಎಂದರು ರಾಜ್‌ ಬಿ ಶೆಟ್ಟಿ.

Advertisement

ನಿರ್ದೇಶಕ ಅರ್ಜುನ್‌ ಜನ್ಯಾ ಚಿತ್ರವನ್ನು ದೇವಸ್ಥಾನಕ್ಕೆ ಹೋಲಿಕೆ ಮಾಡುತ್ತಾರೆ. “ಶಿವರಾಜ ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರ ಇದ್ದ ಹಾಗೆ. ರಮೇಶ್‌ ರೆಡ್ಡಿ ಅವರು ಈ ದೇವಸ್ಥಾನ ಕಟ್ಟಿದವರು. ಛಾಯಾಗ್ರಾಹಕ ಸತ್ಯ ಹೆಗಡೆ ಪ್ರಧಾನ ಅರ್ಚಕರು. ಹೀಗೆ ಇವರೆಲ್ಲರ ಸಹಕಾರದಿಂದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಮುಂದೆ ಸಿಜಿ ವರ್ಕ್‌ ಆರಂಭವಾಗಲಿದೆ ಎಂದರು.

ನಿರ್ಮಾಪಕ ರಮೇಶ್‌ ರೆಡ್ಡಿ ಅವರಿಗೆ ಸಿನಿಮಾ ಆರಂಭವಾಗಿ 10 ದಿನಗಳವರೆಗೆ ಏನೋ, ಹೇಗೋ ಎಂಬ ಭಯ ಇತ್ತಂತೆ. ಆದರೆ, ಅರ್ಜುನ್‌ ಇಡೀ ಸಿನಿಮಾವನ್ನು ಅನಿಮೇಶನ್‌ನಲ್ಲಿ ಮಾಡಿದಂತೆ ಚಿತ್ರೀಕರಣ ಕೂಡಾ ಮಾಡಿದ್ದರಿಂದ ಧೈರ್ಯ ಬಂದು ಅರ್ಜುನ್‌ ಕೇಳಿದ್ದನ್ನೆಲ್ಲಾ ನೀಡಿದರಂತೆ. ಜೊತೆಗೆ ಪ್ರತಿ ದಿನ ಆದ ಚಿತ್ರೀಕರಣವನ್ನು ಕಳುಹಿಸಿಕೊಟ್ಟು ನಿರ್ಮಾಪಕರಿಗೆ ಧೈರ್ಯ ತುಂಬಿದರಂತೆ ಅರ್ಜುನ್‌. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next