Advertisement

45 ಸಾವಿರ ವಸತಿ ರಹಿತರಿಗೆ 45 ಮನೆ !

11:54 PM Oct 29, 2019 | mahesh |

ಉಡುಪಿ ಮನೆ ಕಟ್ಟಿದವರಿಗೆ 6.6 ಕೋ ಟಿ ರೂ. ಅನುದಾನ ಬಾಕಿ
ಉಡುಪಿ 889 ಮನೆಗಳಿಗೆ ಅರೆನಿರ್ಮಾಣ ದ.ಕ. 231 ಕೋ.ರೂ. ಬಾಕಿ

Advertisement

ಕುಂದಾಪುರ: ಈಗಿನ ಅಂಕಿ-ಅಂಶ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 45 ಸಾವಿರ ವಸತಿ ಹಾಗೂ ನಿವೇಶನ ರಹಿತರು ಇದ್ದಾರೆ. ಆದರೆ ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ 45 ಮನೆಗಳಷ್ಟೇ ಮಂಜೂರಾಗಿದೆ. ರಾಜ್ಯ ಸರಕಾರ 2018ರಿಂದ ವಸತಿ ಯೋಜನೆಯಲ್ಲಿ ಮಂಜೂರಾತಿ ಸ್ಥಗಿತಗೊಳಿಸಿದ್ದು ಮಂಜೂರಾದ ಮನೆಗಳನ್ನು ಮರಳಿ ಪಡೆಯುತ್ತಿದೆ.

ಅನುದಾನ ಬಾಕಿ
ವಸತಿ ಯೋಜನೆಯಲ್ಲಿ ಮಂಜೂರಾಗಿ ಮನೆ ನಿರ್ಮಾಣ ಕೈಗೊಂಡವರಿಗೆ ಅನುದಾನ ಬರುತ್ತಿಲ್ಲ. ಕುಂದಾಪುರ ತಾಲೂಕಿನಲ್ಲಿ ಬಸವ ವಸತಿಯಲ್ಲಿ 571 ಮನೆಗಳಿಗೆ 1.87 ಕೋ.ರೂ., ಡಾ| ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ 87 ಮಂದಿ ಫ‌ಲಾನುಭವಿಗಳಿಗೆ 35.2 ಲಕ್ಷ ರೂ., ಕಾರ್ಕಳ ತಾಲೂಕಿನಲ್ಲಿ ಬಸವ ವಸತಿಯಲ್ಲಿ ಒಟ್ಟು 370 ಮನೆಗಳಿಗೆ 1.02 ಕೋ.ರೂ., ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ 121 ಮನೆಗಳಿಗೆ 37 ಲಕ್ಷ ರೂ., ಉಡುಪಿ ತಾಲೂಕಿನಲ್ಲಿ 547 ಮಂದಿಗೆ 2.73 ಕೋ.ರೂ. ಬಸವ ವಸತಿಯಲ್ಲೂ, 74 ಮಂದಿಗೆ 35 ಲಕ್ಷ ರೂ. ಅಂಬೇಡ್ಕರ್‌ ವಸತಿಯಲ್ಲಿ ಎಂದು ಒಟ್ಟು 6.69 ಕೋ.ರೂ. ಬಾಕಿ ಇದೆ.

ದ.ಕ.ಜಿಲ್ಲೆಯಲ್ಲಿ 2010ರಿಂದಲೇ ಅನುದಾನ ಬಾಕಿ ಇದೆ. ಬಂಟ್ವಾಳದಲ್ಲಿ 16,966 ಮಂದಿಗೆ ವಸತಿ ಮಂಜೂರಾಗಿದ್ದು 64 ಕೋ.ರೂ., ಬೆಳ್ತಂಗಡಿಯಲ್ಲಿ 16,386 ಮಂದಿಗೆ ಮಂಜೂರಾಗಿದ್ದು 56.33 ಕೋ.ರೂ., ಮಂಗಳೂರಿನಲ್ಲಿ 9,281 ಮಂದಿಗೆ ಮಂಜೂರಾಗಿದ್ದು 35.9 ಕೋ.ರೂ., ಪುತ್ತೂರು ತಾಲೂಕಿನಲ್ಲಿ 11,673 ಮಂದಿಗೆ ಮಂಜೂರಾಗಿದ್ದು 49.4 ಕೋ.ರೂ., ಸುಳ್ಯದಲ್ಲಿ 6,892 ಮಂದಿಗೆ ಮಂಜೂರಾಗಿದ್ದು 26.1 ಕೋ.ರೂ. ಎಂದು ಒಟ್ಟು ಜಿಲ್ಲೆಯಲ್ಲಿ 231.9 ಕೋ.ರೂ. ಅನುದಾನ ಬಾಕಿ ಇದೆ.

ವಸತಿ ಮಂಜೂರಾಗಿಲ್ಲ
2018ನೇ ಸಾಲಿನಿಂದ ಅಂಬೇಡ್ಕರ್‌ ನಿಗಮ ದಿಂದ ವಸತಿಯೇ ಮಂಜೂರಾಗುತ್ತಿಲ್ಲ. 2017-18ನೇ ಸಾಲಿನಲ್ಲಿ ಮಂಜೂರಾದ ವರಿಗೆ ಕುಂದಾಪುರದ 41, ಉಡುಪಿಯ 88, ಕಾರ್ಕಳದ 23 ಮಂದಿಯ ಮನೆ ನಿರ್ಮಾಣ ಕಾಮಗಾರಿಯ ಜಿಪಿಎಸ್‌ ಮಾಹಿತಿ ನಿಗಮದ ವೆಬ್‌ಸೈಟ್‌ಗೆ ತುಂಬಿಸಲ್ಪಟ್ಟರೂ ಅನುದಾನ ದೊರೆತಿಲ್ಲ. ಫ‌ಲಾನುಭವಿಗಳ ಅಲೆದಾಟ ತಪ್ಪಿಲ್ಲ. ಈ ಬಗ್ಗೆ ವಸತಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಫ‌ಲಕವೊಂದನ್ನು ಹಾಕಲಾಗಿದೆ ಎನ್ನಲಾಗಿದೆ. ವಿವಿಧ ವಸತಿ ಯೋಜನೆಗಳಡಿಯಲ್ಲಿ ಅನುದಾನದ ಕೊರತೆ ಸಹಿತ ಅನುದಾನ ಬಿಡುಗಡೆಯಾಗದ ಬಗ್ಗೆ ಮಾಹಿತಿಯಿದೆ. ಇದಕ್ಕಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡುವ ಆವಶ್ಯಕತೆಯಿಲ್ಲ ಎಂದು ಸೂಚಿಸಲಾಗಿದೆ.

Advertisement

ಮನೆಯೇ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಬಸವ ವಸತಿಯಲ್ಲಿ ಕಾರ್ಕಳದಲ್ಲಿ 121, ಕುಂದಾಪುರದಲ್ಲಿ 536, ಉಡುಪಿ ತಾಲೂಕಿನಲ್ಲಿ 80 ಮನೆಗಳಿಗೆ ಕಾಮಗಾರಿಯಾಗಿ ಜಿಪಿಎಸ್‌ ಅಪ್‌ಲೋಡ್‌ ಮಾಡಿದ್ದರೂ ಅನುದಾನ ಬಂದಿಲ್ಲ. ವಿವಿಧ ನೆವಗಳನ್ನು ಒಡ್ಡಿ ತಿರಸ್ಕರಿಸಲಾಗುತ್ತಿದೆ. ಈ ಮಧ್ಯೆ ಈ ವರ್ಷ ಒಂದಷ್ಟು ಮಂದಿಯನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿದ್ದರೂ ನೆರೆ ಪೀಡಿತರಿಗೆ ಮನೆ ನಿರ್ಮಿಸಿಕೊಡುವ ಆದ್ಯತೆಯ ಸಲುವಾಗಿ ಮಂಜೂರಾತಿ ಪಟ್ಟಿಯನ್ನು ತಡೆ ಹಿಡಿಯಲಾಗಿದೆ.

ಪ್ರಧಾನಮಂತ್ರಿ ಅವಾಸ್‌
ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಉಡುಪಿ ಜಿಲ್ಲೆಗೆ ಕೆಲವು ವರ್ಷಗಳಲ್ಲಿ ಒಟ್ಟು 45 ಮನೆಗಳಷ್ಟೇ ಮಂಜೂರಾಗಿದೆ. ಈ ವರ್ಷ ಇಡೀ ಜಿಲ್ಲೆಗೆ 5 ಮನೆಗಳ ಗುರಿ ನೀಡಲಾಗಿದೆ. 2010-11ರಲ್ಲಿ ನಡೆದ ವಸತಿ ರಹಿತರ ಸಮೀಕ್ಷೆ ಪಟ್ಟಿಯಲ್ಲಿ ನಮೂದಾದವರನ್ನು ವಸತಿ ರಹಿತರು ಎಂದು ಪರಿಗಣಿಸಲಾಗುತ್ತಿದ್ದು ಅದರಂತೆ ಮನೆ ಮಂಜೂರಾಗುತ್ತಿದೆ. ದೇಶಕ್ಕೇ ಒಂದೇ ಮಾದರಿಯ ಸಿದ್ಧ ಮಾದರಿಯಾದ ಕಾರಣ ದ.ಕ., ಉಡುಪಿಯಲ್ಲಿ ವಸತಿ ರಹಿತರೆಂದು ಗುರುತಿಸುವಿಕೆ ಕಷ್ಟವಾಗಿದೆ.

ಸಚಿವರ ಗಮನಕ್ಕೆ ತರುವೆ
ಈ ಎರಡು ವಿಚಾರದಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರ ಜತೆ ಮಾತನಾಡಿ ಸೂಕ್ತವಾದ ಪರಿಹಾರ ಒದಗಿಸಲಾಗುತ್ತದೆ.
– ಬಸವರಾಜ ಬೊಮ್ಮಾಯಿ , ಗೃಹ ಮತ್ತು ಸಹಕಾರ ಸಚಿವರು, ಉಡುಪಿ ಜಿಲ್ಲಾ ಉಸ್ತುವಾರಿ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next