Advertisement

ಮತದಾರರ ಪಟ್ಟಿ ಪರಿಷ್ಕರಣೆಗೆ 45 ದಿನ ಕಾಲಾವಕಾಶ

11:09 AM Sep 09, 2019 | Suhan S |

ಹಾವೇರಿ: ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪವಿಲ್ಲದಂತೆ ಪರಿಷ್ಕರಿಸುವ ಕಾರ್ಯ 45ದಿನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ ಹಾಗೂ ವಿವಿಧ ನ್ಯೂನತೆಗಳೆನಾದರೂ ಇದ್ದರೆ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019ರ ಸಂಬಂಧ ರಾಜಕೀಯ ಪಕ್ಷದ ಮುಖಂಡರ ಸಭೆ ಉದ್ದೇಶಿಸಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸೆ. 15ರ ವರೆಗೆ ಮತದಾರರ ಪರಿಶೀಲನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ, ಮಾರ್ಪಾಡು, ಸ್ಥಳಾಂತರ ಸೇರಿದಂತೆ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳುವವರು 31-12-2001ರ ಮುಂಚಿತವಾಗಿ ಜನನ ಹೊಂದಿರಬೇಕು. ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ ಹಾಗೂ ವಿವಿಧ ನ್ಯೂನ್ಯತೆಗಳೇನಾದರೂ ಇದ್ದರೆ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮುಕ್ತವಾದ ಅವಕಾಶವನ್ನು ಮತದಾರರಿಗೆ ಮಾಡಿಕೊಡಲಾಗಿದೆ. ಈ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ನಾಗರಿಕರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು. ಈ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ಜಿಲ್ಲೆಯ ಎಲ್ಲ ಮತದಾರರು ತಾವು ಹೊಂದಿರುವ ದಾಖಲೆಗಳಾದ ಭಾರತೀಯ ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಆಧಾರ್‌ ಚೀಟಿ, ಪಡಿತರ ಚೀಟಿ (ರೇಷನ್‌ ಕಾರ್ಡ್‌), ಸರ್ಕಾರಿ/ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌, ರೈತರ ಗುರುತಿನ ಚೀಟಿ ಮತ್ತು ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರೆ ದಾಖಲೆಗಳು ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯೊಂದಿಗೆ ನಿಮ್ಮ ಹತ್ತಿರದ ಕೇಂದ್ರಗಳಾದ ಸಾಮಾನ್ಯ ಸೇವಾ ಕೇಂದ್ರ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಕರ್ನಾಟಕ-1 ಕೇಂದ್ರ, ಅಟಲ್ ಜನ ಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯಿತಿ) ಮತ್ತು ಮತಗಟ್ಟೆ ಅಧಿಕಾರಿಗಳು (ಬಿಎಲ್ಒ)ರವರು ಮನೆಮನೆಗೆ ಭೇಟಿ ನೀಡುವವರಿದ್ದು, ಅವರ ಭೇಟಿ ನೀಡಿದ ಸಮಯದಲ್ಲಿ ಹಾಜರಿಪಡಿಸುವುದು. ಇನ್ನು ನಾಗರಿಕರು ಚುನಾವಣಾ ಆಯೋಗದ ವೆಬ್‌ಸೈಟ್ ‘’Voter Helpline’’ Mobile App, New NVSP Portal (www.nvsp.in) ಅಥವಾ ಜಿಲ್ಲೆಯಲ್ಲಿ ಸ್ಥಾಪಿತ ‘1950 ಟೊಲ್ ಫ್ರೀ’ ಮತದಾರರ ಸಹಾಯ ಕೇಂದ್ರದ ಮೂಲಕವು ತಮ್ಮ ಹೆಸರನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಲು ತಿಳಿಸಿದರು.

ಸಾರ್ವಜನಿಕರು ತಮ್ಮ ಹೆಸರು ಮತ್ತು ವಿವರಗಳನ್ನು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ಹೆಸರು ಇರದಿದ್ದಲ್ಲಿ, ನಗದಿತ ನಮೂನೆ-6ರಲ್ಲಿ ಹೆಸರು ಸೇರ್ಪಡೆ, ನಮೂನೆ-7ರಲ್ಲಿ ಹೆಸರು ತೆಗೆದುಹಾಕಲು, ನಮೂನೆ-8ರಲ್ಲಿ ಹೆಸರು ತಿದ್ದುಪಡಿ ಮತ್ತು ನಮೂನೆ-8ಎ ರಲ್ಲಿ ಒಂದುಸ್ಥಳ ದಿಂದ ಬೇರೆ ಸ್ಥಳಕ್ಕೆ ವರ್ಗಾಯಿಸಿಕೊಳ್ಳಲು ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಸಭೆಯಲ್ಲಿ ಉಪಸ್ಥಿತ ಪದಾಧಿಕಾರಿಗಳ ಗಮನಕ್ಕೆ ತಂದರು.

Advertisement

ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್‌ ಕಾರ್ಯಕ್ರಮದ ಅಡಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಇವರ ಮುಖಾಂತರವು ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗುವುದೆಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ ಮಾತನಾಡಿ, ಕೆಲವು ಬಿಎಲ್ಒಗಳು ಮತದಾರರ ಪಟ್ಟಿಯ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ವಲಸೆ ಹೋಗಿರುವ ಮತ್ತು ಒಂದು ಸ್ಥಳದಿಂದ ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡ ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ಹಾಗೆಯೇ ಉಳಿದಿರುವ ಪ್ರಕರಣಗಳು, ಮರಣ ಹೊಂದಿರುವ ಮತದಾರರ ಹೆಸರು, ಕೆಲವು ಮತದಾರರ ಹೆಸರು ಪುನರಾವರ್ತನೆಗೊಂಡ ಪ್ರಕರಣಗಳು ಕಂಡುಬಂದಿದ್ದು, ಇದರಿಂದ ಚುನಾವಣಾ ಸಮಯದಲ್ಲಿ ಗೊಂದಲ ಸೃಷ್ಟಿಯಂತಹ ಸಂದರ್ಭಗಳು ನಡೆಯುತ್ತಿರುವದಾಗಿ ತಿಳಿಸಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಈ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾತನಾಡಿ, ಸಾಕಷ್ಟು ಬಿಎಲ್ಒಗಳು ಉತ್ತಮವಾಗಿ ಮತದಾರರ ಪಟ್ಟಿ ತಯಾರಿಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಬಿಎಲ್ಒರವರು ಯಾರಾದರೂ ಮತದಾರರ ಪಟ್ಟಿ ಕಾರ್ಯದಲ್ಲಿ ಬೇಜವಾಬ್ದಾರಿ ತೋರುವ ಪ್ರಕರಣ ಕಂಡುಬಂದ್ದಲ್ಲಿ ಪರಿಶೀಲಿಸಿ ಅಂಥ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಮುಂಬರುವ ಒಂದು ವಾರದೊಳಗೆ ಜಿಲ್ಲೆಯ ಎಲ್ಲ ಬಿಎಲ್ಒ ಅವರನ್ನು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಗ್ರ ತರಬೇತಿ ನೀಡಲಾಗುವುದು. ಇನ್ನು ಮುಂದೆ ಎಲ್ಲ ಬಿಎಲ್ಒ ಅವರು ಮತದಾರರ ಪಟ್ಟಿಯ ಸಾಕಷ್ಟು ಕೆಲಸವನ್ನು ಮೊಬೈಲ್ ಆ್ಯಪ್‌ ಬಳಸುವ ಮೂಲಕ ಮತದಾರರ ಪಟ್ಟಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತ ನಾಗೇಂದ್ರ ಕಡಕೋಳ ಮಾತನಾಡಿ, ನಗರ ಪ್ರದೇಶದ ಕೆಲವೊಂದು ಶಾಲಾ ಕಟ್ಟಡಗಳಲ್ಲಿ ಒಂದೇ ಕಡೆ 4 ರಿಂದ 5 ಮತಗಟ್ಟೆಗಳಿದ್ದು, ಮತದಾನ ನಡೆಯುವ ಸಮಯದಲ್ಲಿ ಜನದಟ್ಟಣೆ ಜಾಸ್ತಿಯಾಗಿ ಗೊಂದಲವಾಗುತ್ತಿದ್ದು, ಅಂತಹ ಮತಟ್ಟೆಗಳನ್ನು ವಿಭಜಿಸಲು ತಿಳಿಸಿದರು.

ಈ ಕುರಿತು ಪರಿಶೀಲಿಸಿ ಅಂತಹ ಪ್ರದೇಶಗಳಲ್ಲಿ ಸರಕಾರಿ ಶಾಲಾ ಕಟ್ಟಡಗಳು ಇದ್ದಲ್ಲಿ ನಿಯಮಾನುಸಾರ ಮತಗಟ್ಟೆ ರಚಿಸಲು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು, ತಹಶೀಲ್ದಾರ್‌, ಶಿರಸ್ತೇದಾರ್‌ ಡಾ| ಪ್ರಶಾಂತ ನಾಲವಾರ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next