Advertisement

ನಿಷೇಧ ಬೆನ್ನಲ್ಲೇ ಕಠಿನ ಕ್ರಮ: ರಾಜ್ಯಾದ್ಯಂತ 44 ಕಡೆ ಪಿಎಫ್ಐ ಕಚೇರಿಗೆ ಬೀಗ

11:50 PM Sep 29, 2022 | Team Udayavani |

ಬೆಂಗಳೂರು/ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 44ಕ್ಕೂ ಹೆಚ್ಚು ಪಿಎಫ್ಐ ಹಾಗೂ ಅದರ ಸಹವರ್ತಿ ಕಚೇರಿಗಳಿಗೆ ಗುರುವಾರ ಬೀಗ ಜಡಿಯ ಲಾಗಿದೆ. ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸಂಘಟನೆಯ ಹಾಗೂ ಅದರ 8 ಸಹವರ್ತಿ ಸಂಘಟನೆಗಳ ಕಚೇರಿಗಳಿಗೆ ಬೀಗ ಹಾಕಲಾಯಿತು.

Advertisement

ಬೆಂಗಳೂರಿನ ಕೇಂದ್ರ ವಿಭಾಗದ 2, ಉತ್ತರ ವಿಭಾಗದ 2 ಮತ್ತು ಪೂರ್ವ ವಿಭಾಗದ 1 ಕಚೇರಿಗೆ ಬೀಗ ಹಾಕಲಾಗಿದೆ. ಇದುವರೆಗೆ ದಕ್ಷಿಣ ಕನ್ನಡದಲ್ಲಿ 19 ಹಾಗೂ ಉಡುಪಿಯಲ್ಲಿ 9 ಕಡೆ ಕಚೇರಿಗಳನ್ನು ಮುಚ್ಚಲಾಗಿದೆ. ಉಡುಪಿ ನಗರ, ಮಲ್ಪೆಯ ಹೂಡೆ, ಗಂಗೊಳ್ಳಿಯಲ್ಲಿ ಪಿಎಫ್ಐ ಕಚೇರಿ ಮೇಲೆ ಗುರುವಾರ ದಾಳಿ ನಡೆಸಲಾಯಿತು. ಶುಕ್ರವಾರವೂ ಬೀಗ ಹಾಕುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಹಲಸೂರು ಗೇಟ್‌, ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಕಚೇರಿಗಳು, ಉತ್ತರ ವಿಭಾಗದಲ್ಲಿ ಎರಡು ಪಿಎಫ್ಐನ ಎರಡು ಅಂಗ ಸಂಸ್ಥೆಗಳು, ಕೆ.ಜಿ.ಹಳ್ಳಿಯಲ್ಲಿರುವ ಒಂದು ಕಚೇರಿಗೆ ಬೀಗ ಹಾಕಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ಕುಮಾರ್‌, ಬೆಂಗಳೂರು ಸೇರಿ ರಾಜ್ಯದಲ್ಲಿ ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳು ಸೇರಿ 44 ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ. ಜತೆಗೆ ಬುಧವಾರ ಮತ್ತು ಗುರುವಾರ 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಶೋಧಿಸಲಾಗಿದೆ ಎಂದು ಹೇಳಿದರು.

12 ಮಂದಿ ನಾಪತ್ತೆ? :

Advertisement

ಇದೇ ಮಂಗಳೂರಿನಲ್ಲಿ ನಿಷೇಧಿತ ಸಂಘಟನೆಯ ಬಂಧನದ ಪಟ್ಟಿಯಲ್ಲಿದ್ದ 12 ಮಂದಿ ನಾಯಕರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮಂಗಳೂರು ನಗರದ 10 ಮತ್ತು ಎಸ್‌ಪಿ ಕಚೇರಿ ವ್ಯಾಪ್ತಿಯ ಒಟ್ಟು 14 ಮಂದಿಯನ್ನು ಸೆ.27ರಂದು ಮುಂಜಾನೆ ಬಂಧಿಸಲಾಗಿತ್ತು.

50ಕ್ಕೂ ಹೆಚ್ಚು ಕಡೆ ಶೋಧ ಕಾರ್ಯ :

ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸಿದ ಬಳಿಕ ಸಂಘಟನೆಯ ಕೆಲ ಕಾರ್ಯಕರ್ತರು ಅಕ್ರಮವಾಗಿ ಮನೆ ಹಾಗೂ ಇತರ ಸ್ಥಳಗಳಲ್ಲಿ  ಸಭೆ ನಡೆಸಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬುಧವಾರ ಮತ್ತು ಗುರುವಾರ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಹಾಗೂ ಇತರೆಡೆ 50ಕ್ಕೂ ಹೆಚ್ಚು  ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಕಚೇರಿಯಲ್ಲಿದ್ದ  ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಬೀಗ ಹಾಕಲಾಗಿದೆ. ಹಾಗೆಯೇ ಸಭೆ ನಡೆಸಿದ ಸ್ಥಳಗಳನ್ನು ಮಹಜರು ನಡೆಸಿ ಪೊಲೀಸ್‌ ನಿಯಂತ್ರಣಕ್ಕೆ  ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next