ನವದೆಹಲಿ: ಜಗತ್ತಿನ ಸುಮಾರು 88 ರಾಷ್ಟ್ರಗಳಲ್ಲಿ ಹೋಗಿ ನೆಲೆಸಿದ್ದ 4,355 ಭಾರತೀಯರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್, ರಾಜ್ಯಸಭೆಗೆ ತಿಳಿಸಿದ್ದಾರೆ.
ಕುವೈತ್‌ನಲ್ಲಿ 668, ಒಮನ್‌ನಲ್ಲಿ 555, ಬಹರೇನ್‌ನಲ್ಲಿ 203, ಕತಾರ್‌ನಲ್ಲಿ 113, ಮಲೇಷ್ಯಾದಲ್ಲಿ 186, ರಷ್ಯಾದಲ್ಲಿ 15, ಅಮೆರಿಕದಲ್ಲಿ ಐವರು ಭಾರತೀಯರು ಕೊರೊನಾದಿಂದಾಗಿ ಅಸುನೀಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, 2019ರಲ್ಲಿ 96 ಹುಲಿಗಳು ಸಾವನ್ನಪ್ಪಿದ್ದವು. 2020ರಲ್ಲಿ 106 ಹಾಗೂ 2021ರಲ್ಲಿ 127 ಹುಲಿ ಸಾವನ್ನಪ್ಪಿವೆ ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನೋಟಿಸ್
ತೆಲಂಗಾಣ ರಾಜ್ಯ ರಚನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣಕ್ಕೆ ವಿರುದ್ಧವಾಗಿ, ಗುರುವಾರ ನಡೆದ ರಾಜ್ಯಸಭಾ ಕಲಾಪದ ವೇಳೆ ಟಿಆರ್‌ಎಸ್ ಸಂಸದರಾದ ಕೆ. ಕೇಶವರಾವ್, ಜೋಗಿನಿಪಲ್ಲಿ ಸಂತೋಷ್ ಕುಮಾರ್, ಕೆ.ಆರ್. ಸುರೇಶ್ ರೆಡ್ಡಿ ಹಕ್ಕುಚ್ಯುತಿ ಮಂಡನೆ ನೋಟಿಸ್ ಜಾರಿಗೊಳಿಸಿ, ಸಭಾತ್ಯಾಗ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಇತ್ತೀಚೆಗೆ ನಡೆದ ಬಜೆಟ್ ಮೇಲಿನ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾರ್ಪಣೆ ಕುರಿತಾದ ಕಲಾಪದಲ್ಲಿ ಮಾತನಾಡಿದ ಮೋದಿ, “ಆಂಧ್ರಪ್ರದೇಶ ಮರುವಿಂಗಡಣೆ ವಿಧೇಯಕ ಮಂಡನೆಯಾದಾಗ ಸಂಸತ್ತಿನಲ್ಲಿ ಮೈಕುಗಳನ್ನು ಬಂದ್ ಮಾಡಲಾಗಿತ್ತು. ಸದನದಲ್ಲಿ ಖಾರದ ಪುಡಿ ಎರಚಲಾಯಿತು. ಇದು ಪ್ರಜಾಪ್ರಭುತ್ವವೇ?” ಎಂದು ಪ್ರಶ್ನಿಸಿದ್ದರು.