ಹಾವೇರಿ: ಜಿಲ್ಲಾದ್ಯಂತ ರವಿವಾರ ತಡ ರಾತ್ರಿಯಿಂದ ಆರಂಭವಾದ ಮಳೆ ಸೋಮವಾರ ಸಂಜೆ ವರೆಗೂ ಎಡಬಿಡದೇ ಮುಂದುವರಿದಿದೆ. ಒಮ್ಮೆ ಆರ್ಭಟ, ಮತ್ತೂಮ್ಮೆ ಜಿಟಿಜಿಟಿ ಮಳೆಯಾಗುತ್ತ ದಿನವಿಡೀ ಸುರಿದಿದೆ.
ರವಿವಾರ ಬೆಳಗ್ಗೆಯಿಂದ ಸೋಮವಾರ ಬೆಳಗಿನ 8 ವರೆಗೆ ಸತತ 24 ಗಂಟೆ ಹಾವೇರಿ ತಾಲೂಕಿನಲ್ಲಿ 19.6 ಮಿಮೀ, ಹಾನಗಲ್ಲ 43.6, ಶಿಗ್ಗಾವಿ 29.8, ಸವಣೂರು 18.5, ರಾಣಿಬೆನ್ನೂರು 3.5, ಬ್ಯಾಡಗಿ 12.3, ಹಿರೇಕೆರೂರು 16 ಮಿಮೀ ಮಳೆ ಬಿದ್ದಿದೆ.
ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ರಾಣಿಬೆನ್ನೂರು ತಾಲೂಕಿನಲ್ಲಿ 5 ಮನೆಗಳಿಗೆ ಹಾನಿಯಾಗಿದ್ದು, ಸವಣೂರು ತಾಲೂಕಿನಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ಪೂರ್ಣ ಹಾಗೂ ಭಾಗಶಃ ಹಾನಿಯಾಗಿದೆ. ಹಾವೇರಿ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ಸವಣೂರು ತಾಲೂಕಿನ ಮಂತ್ರೋಡಿ, ಹುರಳಿಕುಪ್ಪಿ ಮುಂತಾದ ಗ್ರಾಮಗಳಲ್ಲಿ ಮನೆ ಗೋಡೆ ಕುಸಿದು, ಛಾವಣಿ ಬಿದ್ದು ಅನೇಕ ಕುಟುಂಬಗಳು ಬೀದಿ ಪಾಲಾಗಿವೆ.
ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಮಳೆ ಜೋರಾದ ವೇಳೆ ಹಳೆ ಪಿಬಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದವು. ಶಹರ ಪೊಲೀಸ್ ಠಾಣೆ ಎದುರುನಿಂದ ಪ್ರವಾಸಿ ಮಂದಿರದ ವರೆಗೂ ಮೊಣಕಾಲವರೆಗೆ ನೀರು ನಿಂತಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೆಲವರು ಅದೇ ನೀರಿನಲ್ಲಿ ಧೈರ್ಯ ಮಾಡಿ ವಾಹನ ಓಡಿಸಿದರು. ಗೂಗಿಕಟ್ಟೆ, ಮಾರುಕಟ್ಟೆ ಪ್ರದೇಶಗಳಲ್ಲಿ ಮಳೆ ನೀರು ತುಂಬಿ ಅಸ್ತವ್ಯಸ್ತಗೊಂಡಿದ್ದವು.
ಕೆಲ ಗ್ರಾಮಗಳಲ್ಲಿ ರವಿವಾರವೇ ನಾಗರಪಂಚಮಿ ಆಚರಿಸಿದ್ದರಿಂದ ಸೋಮವಾರ ಶಾಲೆ ಇದ್ದವು. ಆದರೆ, ಶಾಲೆಗೆ ಹೋಗಲಾಗದೇ ವಿದ್ಯಾರ್ಥಿಗಳು ಪರದಾಡುವಂತಾಯಿತು. ಎಡಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಪಂಚಮಿ ಹಬ್ಬದ ಸಂಭ್ರಮವೂ ಮಾಯವಾಗಿತ್ತು. ಮಕ್ಕಳು ಜೋಕಾಲಿ ಆಡಲಾಗದೇ ಮನೆಯಲ್ಲೇ ಕೂರುವಂತಾಯಿತು. ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಅಪಾಯ ಎದುರಾಗಿದೆ. ಹಾವೇರಿ, ಶಿಗ್ಗಾವಿ, ಸವಣೂರು, ಹಿರೇಕೆರೂರು, ರಟ್ಟೀಹಳ್ಳಿ ರಾಣಿಬೆನ್ನೂರು ಸೇರಿದಂತೆ ಎಲ್ಲ ಕಡೆಗಳಲ್ಲೂ ಮಳೆ ಮುಂದುವರಿದಿದೆ. ತುಂಗಭದ್ರಾ, ವರದಾ ನದಿಗಳು ತುಂಬಿ ಹರಿಯುತ್ತಿದ್ದರೂ ಇನ್ನೂ ಆಪಾಯದ ಮಟ್ಟ ಮೀರಿಲ್ಲ.
ಬೆಳೆ ಹಾನಿ: ಸುರಿಯುತ್ತಿರುವ ಮಳೆಯಿಂದಾಗಿ ಸವಣೂರು ತಾಲೂಕಿನಲ್ಲಿ ಸುಮಾರು 36 ಹೆಕ್ಟೇರ್, ಹಾವೇರಿ ತಾಲೂಕಿನಲ್ಲಿ 80 ಹೆಕ್ಟೇರ್‌ನಷ್ಟು ಕೃಷಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಹದಭರಿತವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲಾದ್ಯಂತ ಎಲ್ಲೆಡೆ ಬಿತ್ತನೆಯಾಗಿದೆ. ಈಗ ಎಲ್ಲ ಬೆಳೆಗಳೂ ಸಸಿ ಹಂತದಲ್ಲಿದ್ದು, ಎರಡು ದಿನಗಳಿಂದ ಬಿಡದೇ ಮಳೆ ಸುರಿಯುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ಬೆಳೆ ಹಾನಿಯಾಗುವ ಆತಂಕ ರೈತರಿಗೆ ಎದುರಾಗಿದೆ.