ಲಂಡನ್: ನಾವು ದೊಡ್ಡವರಾಗುತ್ತಾ ಹೋದಂತೆ ವಯಸ್ಸಿಗೆ ತಕ್ಕ ಏನಾಗಬೇಕೋ ಅದು ನಡೆಯಬೇಕು. ಮದುವೆ, ಮಕ್ಕಳು ಇತ್ಯಾದಿ ವಿಚಾರಕ್ಕೂ ಇದು ಅನ್ವಯವಾಗುತ್ತದೆ. ಕೆಲವರು ಮದುವೆ ಆಗಲು ಒಂದು ಒಂದೊಳ್ಳೆ, ಹುಡುಗ- ಹುಡುಗಿ ಸಿಗಬೇಕೆಂದು ಕಾಯುತ್ತಾರೆ. ಇನ್ನು ಕೆಲವರು ಜೀವನದಲ್ಲಿ ಏನಾದರೂ ಸಾಧಿಸಿ ಅಥವಾ ಸೆಟಲ್ ಆದ್ಮೇಲೆ ಮದುವೆಯ ಬಗ್ಗೆ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬರು ತನ್ನನ್ನು ತಾನೇ ಮದುವೆ ಆಗಿದ್ದಾರೆ.!
ಕೇಳಲು ಅಚ್ಚರಿಯಾದರೂ ಯುನೈಟೆಡ್ ಕಿಂಗ್ಡಮ್ ನಲ್ಲಿ (ಇಂಗ್ಲೆಂಡ್) ಇಂಥದ್ದೊಂದು ಮದುವೆ ನಡೆದಿದೆ.
ವೃತ್ತಿಯಲ್ಲಿ ಕ್ರೆಡಿಟ್ ಕಂಟ್ರೋಲರ್ ಆಗಿರುವ ಯುನೈಟೆಡ್ ಕಿಂಗ್ಡಮ್ ನಲ್ಲಿರುವ 42 ವರ್ಷದ ಸಾರಾ ವಿಲ್ಕಿನ್ಸನ್ ಅವರು ಎರಡು ದಶಕದ ಕಾಯುವಿಕೆಯ ಬಳಿಕ ತನ್ನ ಕನಸಿನಂತೆ ಮದುವೆಯನ್ನು ಆಗಿದ್ದಾರೆ.
ಸಾರಾ ವಿಲ್ಕಿನ್ಸನ್ ಅವರು ತಾನು ಮದುವೆ ಆಗಬೇಕೆಂದು ಪ್ರತಿ ತಿಂಗಳು ಹಣ ಜೋಡಿಸಿಕೊಂಡು ಬಂದಿದ್ದಾರೆ. ಆದರೆ 20 ವರ್ಷದಿಂದ ಅವರಿಗೆ ಪರ್ಫೆಕ್ಟ್ ಸಂಗಾತಿಯೇ ಸಿಕ್ಕಿಲ್ಲ. ಸಾರಾ ತನ್ನ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ( ಕೋವಿಡ್ ಲಾಕ್ ಡೌನ್ ವೇಳೆ) ಡೈಮಂಡ್ ಎಂಗೇಜ್ ಮೆಂಟ್ ರಿಂಗ್ ವೊಂದನ್ನು ಖರೀದಿಸಿದ್ದರು. ಅಂದಿನಿಂದ ಅವರು ಬೇರೆ ಅವರನ್ನು ಹುಡುಕುವುದಕ್ಕಿಂತ ತನ್ನನ್ನು ತಾನೇ ಮದುವೆ ಆಗಬಹುದೆನ್ನುವ ನಿರ್ಧಾರದ ಬಗ್ಗೆ ಯೋಚನೆ ಮಾಡುತ್ತಿದ್ದರು.
ಅದರಂತೆ ಇತ್ತೀಚೆಗೆ ಸಾರಾ ತಾನು ದುಡಿದು ಮದುವೆಗೆಂದು ಪ್ರತಿ ತಿಂಗಳು ಉಳಿಸಿಟ್ಟಿದ್ದ ಹಣದಿಂದ ಅದ್ಧೂರಿಯಾಗಿಯೇ ತನ್ನನ್ನು ತಾನೇ ವಿವಾಹವಾಗಿದ್ದಾರೆ. ಸುಮಾರು 10 ಲಕ್ಷ ರೂ.ಖರ್ಚು ಮಾಡಿ ಗ್ರ್ಯಾಂಡ್ ಆಗಿ ಸಾರಾ ವಿವಾಹವಾಗಿದ್ದಾರೆ.
ಸಮಾರಂಭದಲ್ಲಿ ವಿಲ್ಕಿನ್ಸನ್ ಅವರ 40 ಹತ್ತಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ವಿವಾಹದ ವೇಳೆ ತನ್ನ ತಾಯಿಯ ಜೊತೆಯಲ್ಲಿ ಬಂದು ವಧುವಾಗಿ ಕಂಗೊಳಿಸಿದ ಸಾರಾ ಅವರು 14 ಪ್ರತಿಜ್ಞೆಗಳನ್ನು ಮಾಡಿದ್ದಾರೆ.