ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸೆ. 18ರಿಂದ 20ರ ವರೆಗೆ ಸುರಿದ ಧಾರಾಕಾರ ಗಾಳಿ-ಮಳೆ ಹಾಗೂ ಪ್ರವಾಹದಿಂದಾಗಿ ಮೆಸ್ಕಾಂಗೆ ಒಟ್ಟು 42.15 ಲಕ್ಷ ರೂ. ನಷ್ಟ ಸಂಭವಿಸಿದೆ.
ಮೆಸ್ಕಾಂ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ 27 ಪರಿವರ್ತಕಗಳಿಗೆ, 221 ವಿದ್ಯುತ್ ಕಂಬ ಗಳಿಗೆ ಹಾನಿಯಾಗಿದೆ. ಒಟ್ಟು 5.25 ಕಿ.ಮೀ. ವಿದ್ಯುತ್ ಮಾರ್ಗ ಹಾನಿಗೀಡಾಗಿದೆ. ದ.ಕ. ದಲ್ಲಿ 26.69 ಲಕ್ಷ ರೂ., ಉಡುಪಿ ಜಿಲ್ಲೆಯಲ್ಲಿ 9.93 ಲಕ್ಷ ರೂ., ಶಿವಮೊಗ್ಗ ಜಿಲ್ಲೆಯಲ್ಲಿ 1.93 ಲಕ್ಷ ರೂ. ಹಾಗೂ ಚಿಕ್ಕಮಗಳೂರಿನಲ್ಲಿ 3.60 ಲಕ್ಷ ರೂ. ನಷ್ಟ ಸಂಭವಿಸಿದೆ.
ದ.ಕ. ಜಿಲ್ಲೆಯಲ್ಲಿ 12 ಪರಿವರ್ತಕಗಳು, 100 ವಿದ್ಯುತ್ ಕಂಬಗಳು ಹಾಗೂ 1.26ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದ್ದು 26.69 ಲ.ರೂ. ನಷ್ಟ ಸಂಭವಿಸಿದೆ. ಉಡುಪಿ ಜಿಲ್ಲೆಯಲ್ಲಿ 13 ಪರಿವರ್ತಕಗಳು, 73 ಕಂಬಗಳು ಹಾಗೂ 1.81 ಕಿ.ಮೀ. ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿ ಒಟ್ಟು 9.93 ಲಕ್ಷ ರೂ. ನಷ್ಟ ಸಂಭವಿಸಿದೆ. ಶಿವಮೊಗ್ಗದಲ್ಲಿ 21 ಕಂಬಗಳು, 0.42 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಯಾಗಿದ್ದು, 1.93 ಲಕ್ಷ ರೂ. ನಷ್ಟ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಪರಿವರ್ತಕಗಳು, 27 ಕಂಬಗಳು ಹಾಗೂ 1.76 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿ 3.60 ಲಕ್ಷ ರೂ. ನಷ್ಟ ಸಂಭವಿಸಿದೆ.
2020ರ ಮಳೆಗಾಲದಲ್ಲಿ 2,497 ಲಕ್ಷ ರೂ. ನಷ್ಟ
ಈ ಮಳೆಗಾಲದ ಆರಂಭದಿಂದ ಈ ವರೆಗೆ ಸುರಿದ ಧಾರಾಕಾರ ಗಾಳಿ, ಮಳೆ ಹಾಗೂ ಪ್ರವಾಹದಿಂದಾಗಿ 1,011 ಪರಿವರ್ತಕಗಳು, 17,231 ವಿದ್ಯುತ್ ಕಂಬಗಳಿಗೆ ಹಾಗೂ ಒಟ್ಟು 738.59 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದ್ದು, ಒಟ್ಟು 2497.13 ಲಕ್ಷ ರೂ. ನಷ್ಟ ಸಂಭವಿಸಿದೆ.
ಈ ಪೈಕಿ ದ.ಕ.ದಲ್ಲಿ 331 ಪರಿವರ್ತಕ, 5,168 ವಿದ್ಯುತ್ ಕಂಬಗಳಿಗೆ ಹಾಗೂ 207.97 ಕಿ.ಮೀ. ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ಉಡುಪಿಯಲ್ಲಿ 558 ಪರಿವರ್ತಕ ಗಳು, 2602 ವಿದ್ಯುತ್ ಕಂಬಗಳು ಹಾಗೂ 61.71 ಕಿ.ಮೀ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿವೆ. ಉಳಿದಂತೆ ಶಿವಮೊಗ್ಗದಲ್ಲಿ 101ಪರಿವರ್ತಕಗಳು, 5,205 ವಿದ್ಯುತ್ ಕಂಬಗಳು ಹಾಗೂ 101.81 ಕಿ.ಮೀ ವಿದ್ಯುತ್ ಮಾರ್ಗ ಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 21 ಪರಿವರ್ತಕಗಳು, 4,256 ವಿದ್ಯುತ್ ಕಂಬಗಳು ಹಾಗೂ 412.10 ಕಿ.ಮೀ ವಿದ್ಯುತ್ ಮಾರ್ಗಗಳಿಗೆ ಈ ಬಾರಿಯ ಗಾಳಿ ಮಳೆಯಿಂದಾಗಿ ಹಾನಿಯಾಗಿವೆ.
ಸೆ. 18ರಿಂದ 20ರ
ವರೆಗೆ ಸುರಿದ ಧಾರಾಕಾರ ಗಾಳಿ, ಮಳೆಯಿಂದ 42.15 ಲಕ್ಷ ರೂ. ನಷ್ಟ ಸಂಭವಿಸಿದೆ. ಮೆಸ್ಕಾಂ ಸಿಬಂದಿ, ಅಧಿಕಾರಿಗಳು ಅವಿರತವಾಗಿ ಶ್ರಮಿಸಿ ಗ್ರಾಹಕರ ಸಹಕಾರದಿಂದ ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಇರುವ ಗ್ರಾಹಕರು ಸ್ವಯಂಪ್ರೇರಿತರಾಗಿ ಬಂದು ವಿದ್ಯುತ್ ಬಿಲ್ ಪಾವತಿಸಿ ಇನ್ನಷ್ಟು ಉತ್ತಮ ಸೇವೆ ನೀಡಲು ಸಹಕಾರ ನೀಡಬೇಕಾಗಿದೆ.
– ಪ್ರಶಾಂತ್ ಕುಮಾರ್ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು-ಮೆಸ್ಕಾಂ