Advertisement

401ನೇ ಜಂಬೂ ಸವಾರಿ; ಅಭಿಮನ್ಯುಗೆ ಚೊಚ್ಚಲ ಅಂಬಾರಿ

09:59 AM Oct 26, 2020 | Nagendra Trasi |

ಮೈಸೂರು:ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಅ.26ರಂದು ನಡೆಯಲಿದ್ದು, ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಕೊರೊನಾ ಆತಂಕ, ನೆರೆ ಹಾವಳಿ ಸಂದರ್ಭದಲ್ಲಿ ದಸರಾ ಆಚರಣೆ ಬೇಕೆ-ಬೇಡವೇ ಎಂಬ ಪರ ವಿರೋಧ ಚರ್ಚೆ ನಡುವೆ ಸರ್ಕಾರ ಸರಳವಾಗಿ ಅರಮನೆಗೆ ಸೀಮಿತವಾಗುವಂತೆ ದಸರಾ ನಡೆಸುತ್ತಿದೆ.

Advertisement

ಮಧ್ಯಾಹ್ನ 2.59ರಿಂದ 3.20ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡುವರು. ನಂತರ ಮಧ್ಯಾಹ್ನ 3.40ರಿಂದ ರಿಂದ 4.30 ಗಂಟೆಗೆ ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಇದರೊಂದಿಗೆ ಅಂಬಾರಿ ಹೊತ್ತ ಅಭಿಮನ್ಯು ಕುಮ್ಕಿ ಆನೆಗಳಾದ ಕಾವೇರಿ ಹಾಗೂ ವಿಜಯಾಳೊಂದಿಗೆ ಹೆಜ್ಜೆ ಹಾಕಲಿದ್ದಾನೆ. ಪಟ್ಟದ ಆನೆ ಗೋಪಿ ನಿಶಾನೆ ಆನೆ ವಿಕ್ರಮ ಹಿಂದೆ ಸಾಗಲಿವೆ. ಈ ಬಾರಿ ಪಂಜಿನ ಕವಾಯತು ಇಲ್ಲದಿರುವುದರಿಂದ ಕೇವಲ 40 ನಿಮಿಷ ನಡೆಯುವ ಮೆರವಣಿಗೆಯೊಂದಿಗೆ 10 ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

ಅಂಬಾರಿಗೆ ಪುಷ್ಪಾರ್ಚನೆ ವೇಳೆ 6 ಮಂದಿ ಗಣ್ಯರಿಗೆ ಮಾತ್ರ ಅವಕಾಶವಿದೆ. ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ನಗರ ಪೊಲೀಸ್‌ ಆಯುಕ್ತರು, ರಾಜ ವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜಒಡೆಯರ್‌, ಮೇಯರ್‌ ತಸ್ನೀಂ ವೇದಿಕೆಯಲ್ಲಿರುತ್ತಾರೆ. ಉಳಿದಂತೆ ಇತರ ಜನಪ್ರತಿನಿಧಿಗಳಿಗೆ ಅವಕಾಶ ಇಲ್ಲ. ಜಂಬೂ ಸವಾರಿಯನ್ನು ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next