Advertisement

ಮತ್ಸ್ಯಕ್ರಾಂತಿ ಯೋಜನೆಯಡಿ ರಾಜ್ಯಕ್ಕೆ 4 ಸಾವಿರ ಕೋಟಿ ರೂ.: ಶ್ರೀನಿವಾಸ ಪೂಜಾರಿ

08:30 PM Jun 07, 2020 | Sriram |

ಕಾರವಾರ: ಕೇಂದ್ರ ಸರಕಾರದ ಮತ್ಸ್ಯಕ್ರಾಂತಿ ಯೋಜನೆಯಡಿ ರಾಜ್ಯಕ್ಕೆ ಸುಮಾರು 4 ಸಾವಿರ ಕೋಟಿ ರೂ. ಅನುದಾನ ದೊರೆಯುವ ನಿರೀಕ್ಷೆ ಇದೆ. ಅನುದಾನವನ್ನು ವಿವಿಧ ಹಂತಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಬಳಸಲಾಗುವುದು ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ರವಿವಾರ ಕಾರವಾರದ ಮೀನು ಮಾರುಟ್ಟೆ ನಿರ್ಮಾಣ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, 140 ಕೋಟಿ ರೂ. ವೆಚ್ಚದಲ್ಲಿ ಬೆಳಂಬಾರದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ ಮಾಡುವ ಪ್ರಸ್ತಾವವನ್ನು ಸಚಿವ ಸಂಪುಟದ ಗಮನಕ್ಕೆ ತಂದು ಅನುಮೋದನೆ ತರಲಾಗುವುದು. ಮೀನುಗಾರಿಕೆಗೆ ಅಗತ್ಯ ಇರುವ ಮೂಲಸೌಲಭ್ಯ ಒದಗಿಸಲಾಗುತ್ತದೆ ಎಂದರು.

ಶಾಶ್ವತ ತಡೆಗೋಡೆ ಮರುಪರಿಶೀಲನೆ 
ಉಳ್ಳಾಲದಿಂದ ಕಾರವಾರದವರೆಗಿನ 320 ಕಿ.ಮೀ. ಸಮುದ್ರ ಕಿನಾರೆಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕೆಂಬ ಪ್ರಸ್ತಾವ ಬಹಳ ಹಿಂದಿನಿಂದಲೂ ಇದೆ. ಏಳು ವರ್ಷಗಳ ಹಿಂದೆಯೇ 925 ಕೋಟಿ ರೂ. ನಬಾರ್ಡ್‌ನಿಂದ ನೀಡಲು ಯೋಚಿಸಲಾಗಿತ್ತು. ಆದರೆ, ಶಾಶ್ವತವಾಗಿ ಮಾಡಲು ಈಗ ಈ ವೆಚ್ಚ ಹೆಚ್ಚಾಗಿದೆ. ಯೋಜನೆ ಮರುಪರಿಶೀಲಿಸಲಾಗುವುದು ಎಂದರು.

2017- 18, 2018- 19ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 50 ಸಾವಿರ ರೂ.ಗೆ ಸೀಮಿತಗೊಳಿಸಿ, ಸಾಲ ಪಡೆದಿರುವ 23 ಸಾವಿರ ಮೀನುಗಾರರಿಗೆ 60 ಕೋಟಿ ರೂ.ವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮನ್ನಾ ಮಾಡಿದ್ದಾರೆ. ಆ ಹಣವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಎಲ್ಲರ ಖಾತೆಗೆ ಜಮೆ ಮಾಡುವ ಕಾರ್ಯ ನಡೆಯುತ್ತಿದೆ. ಇದರ ಜತೆ ಉಳಿತಾಯ ಪರಿಹಾರ ಯೋಜನೆಯ ಹಣ ಕೂಡ ಒಂದು ವಾರದಲ್ಲಿ ಜಮಾ ಆಗಲಿದೆ ಎಂದರು.

ಕಾರವಾರದ ಮೀನು ಮಾರುಕಟ್ಟೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು 400 ಮೀನುಗಾರ ಮಹಿಳೆಯರು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲ ಭಾಗದ ನಿರ್ಮಾಣದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವುದರಿಂದ ಸದ್ಯಕ್ಕೆ 180 ಜನರಿಗೆ ಅವಕಾಶ ನೀಡಲಾಗುವುದು ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next