Advertisement

ಐಸಿಎಂಆರ್‌ ಕೋವಿಡ್‌ ಸಮೀಕ್ಷೆಯಲ್ಲಿ 400 ಮಾದರಿ ಸಂಗ್ರಹ

07:17 PM Aug 26, 2020 | Team Udayavani |

ಚಿತ್ರದುರ್ಗ: ಸಮುದಾಯ ಮಟ್ಟದಲ್ಲಿ ಕೋವಿಡ್‌-19 ಸೋಂಕಿನ ಹರಡುವಿಕೆಯ ಸದ್ಯದ ಪರಿಸ್ಥಿತಿಯ ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವತಿಯಿಂದ ಮಂಗಳವಾರ ಜಿಲ್ಲೆಯಲ್ಲಿ ಏರ್ಪಡಿಸಿದ್ದ 2ನೇ ಸುತ್ತಿನ ನ್ಯಾಷನಲ್‌ ಸಿರೋ ಸರ್ವೇಲೆನ್ಸ್‌ ಫಾರ್‌ ಕೋವಿಡ್‌-19 ಸಮೀಕ್ಷೆಯಲ್ಲಿ 400 ಮಾದರಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಆರ್‌. ರಂಗನಾಥ್‌ ತಿಳಿಸಿದ್ದಾರೆ.

Advertisement

ಈ ಸರ್ವೇಕ್ಷಣೆಯಲ್ಲಿ ಮಂಗಳವಾರ ಜಿಲ್ಲೆಯ ಒಟ್ಟು 10 ಸ್ಥಳಗಳಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಯ ಸಹಕಾರದೊಂದಿಗೆ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಫಾರ್‌ ರೀಸರ್ಚ್‌ ಟ್ಯೂಬ್ಯೂರೋಕ್ಯೂಲೊಸಿಸ್‌ನ 30 ಜನರ ತಂಡದಿಂದ ಸಮೀಕ್ಷಾ ಕಾರ್ಯವನ್ನು ವ್ಯವಸ್ಥಿತವಾಗಿ ನೆರವೇರಿಸಲಾಯಿತು. ಜಿಲ್ಲೆಯ 10 ಸ್ಥಳಗಳಲ್ಲಿ ಒಟ್ಟು ಪ್ರದೇಶವನ್ನು 4 ಕ್ಲಸ್ಟರ್‌ಗಳಾಗಿ ವಿಂಗಡಿಸಿ, ಪ್ರತಿ ಕ್ಲಸ್ಟರ್‌ನಿಂದ ರ್‍ಯಾಂಡಮ್‌ ಸ್ಯಾಂಪಲಿಂಗ್‌ ಮಾದರಿಯಲ್ಲಿ ಮನೆಗಳನ್ನು ಆಯ್ಕೆ ಮಾಡಿ ಆ ಮನೆಯ ಆಯ್ದ ವ್ಯಕ್ತಿಗೆ ಆಪ್ತ ಸಮಾಲೋಚನೆ ನಡೆಸಲಾಯಿತು.

ಪ್ರಶ್ನಾವಳಿಗಳಿಗೆ ಉತ್ತರ ಪಡೆದು ಅವರಿಂದ ಪರೀಕ್ಷೆ ನಡೆಸುವುದಕ್ಕೆ ಸಮ್ಮತಿ ಪಡೆದು 4-5 ಎಂ.ಎಲ್‌ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು. ಪ್ರತಿ ಕ್ಲಸ್ಟರ್‌ನಿಂದ 10 ಮಾದರಿಗಳಂತೆ ಪ್ರತಿ ಸ್ಥಳದಿಂದ 40 ಮಾದರಿಗಳು ಒಟ್ಟು 400 ಮಾದರಿಗಳನ್ನು ಸಂಗ್ರಹಿಸಲಾಯಿತು. ಮೊದಲ ಸುತ್ತಿನ ಕೋವಿಡ್‌-19 ಪರೀಕ್ಷೆಯಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಸಮೀಕ್ಷಾ ಕಾರ್ಯದಲ್ಲಿ ರಾಜ್ಯ ನೋಡಲ್‌ ಅಧಿಕಾರಿ ಡಾ| ನಿರ್ಮಲಾ, ಡಾ| ಚೇತನಾ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಸಮೀಕ್ಷಾ ಕಾರ್ಯದ ನೋಡಲ್‌ ಅಧಿಕಾರಿ ಡಾ| ಆರ್‌. ರಂಗನಾಥ್‌ ಹಾಗೂ ಪರೀಕ್ಷಾ ತಾಂತ್ರಿಕ ತಂಡದ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next