ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಗೆ ಮಾರ್ಚ್ ವೇಳೆಗೆ ಸುಮಾರು 400 ಹೊಸ ಬಸ್‌ಗಳು ಬರಲಿವೆ. ಪ್ರಯಾಣಿಕರ ಅನುಕೂಲಕ್ಕೆ ಸಂಸ್ಥೆಯ ಎಲ್ಲ ಬಸ್ ಗಳಲ್ಲೂ ಉಚಿತ ವೈಫೈ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳ್ಳಲಿದೆ ಎಂದು ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾರ್ಚ್ ವೇಳೆಗೆ 400 ಹೊಸ ಬಸ್ ಗಳು ಸೇವೆಗೆ ಲಭ್ಯವಾಗಲಿದ್ದು, ಮುಂದಿನ ವರ್ಷ ಸುಮಾರು 650 ಹೊಸ ಬಸ್‌ಗಳು ಬರಲಿವೆ. ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 120 ಮಿನಿ ನಗರ ಸಾರಿಗೆ ಬಸ್ ಸಂಚಾರ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ವೈಫೈ ನೀಡಿಕೆಗೆ ಮುಂದಾಗಿದ್ದು, ಇದರ ಭಾಗವಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳಲ್ಲೂ ಉಚಿತ ವೈಫೈ ಸೇವೆ ದೊರೆಯಲಿದೆ. ಅದೇ ರೀತಿ ಪ್ರಯಾಣಿಕರ ಕುಂದು- ಕೊರತೆ ಮಾಹಿತಿಗೆ ವಾಯವ್ಯ ಸಾರಿಗೆ ಸಂಸ್ಥೆ ಶೀಘ್ರದಲ್ಲೇ ವಾಟ್ಸ್ ಆ್ಯಪ್ ಆರಂಭಿಸಲಿದೆ ಎಂದರು. ಹ
ಳಿಯಾಳ, ಭಟ್ಕಳ, ಹುನಗುಂದ ಸೇರಿದಂತೆ ವಿವಿಧ ಕಡೆ ಹೊಸ ಡಿಪೋ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನವಲಗುಂದ ನಿಲ್ದಾಣ ಹೊಸ ಕಟ್ಟಡಕ್ಕೆ ಟೆಂಡರ್ ಆಗಿದೆ. ನರಗುಂದ ನಿಲ್ದಾಣ ನಿರ್ಮಾಣ ಹಂತದಲ್ಲಿದೆ. ಹುಬ್ಬಳ್ಳಿಯಲ್ಲಿ ಹೊಸೂರು ಬಸ್‌ನಿಲ್ದಾಣ ಇದೇ ವರ್ಷ ಪೂರ್ಣಗೊಳ್ಳಲಿದೆ. ಅದೇ ರೀತಿ ಇನ್ನೆರಡು ತಿಂಗಳಲ್ಲಿ ಹುಬ್ಬಳ್ಳಿ ನಗರ ಸಾರಿಗೆ ಬಸ್ ನಿಲ್ದಾಣ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು.
100 ಕೋಟಿ ರೂ.ನಷ್ಟ: ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ವಿನೋತ್ ಪ್ರಿಯಾ ಮಾತನಾಡಿ, ಕಳಸಾ-ಬಂಡೂರಿ, ಮಹದಾಯಿ ಹೋರಾಟದಿಂದ ಸುಮಾರು 9 ಕೋಟಿ, ಸಂಸ್ಥೆ ನೌಕರರು ಇನ್ನಿತರ ಮುಷ್ಕರದಿಂದ ಸುಮಾರು 13 ಕೋಟಿ ರೂ., ನೋಟುಗಳ ಅಪನಗದೀಕರಣದಿಂದ ಸುಮಾರು 11 ಕೋಟಿ ರೂ. ಸೇರಿದಂತೆ ಒಟ್ಟು 100 ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಕುಸಿತವಾಗಿದೆ. ಸಂಸ್ಥೆಗೆ ಪ್ರತಿ ದಿನ ಸುಮಾರು 5.05 ಕೋಟಿ ರೂ. ವರಮಾನ ಬರಬೇಕಾಗಿದೆ. ಆದರೆ ಸುಮಾರು 4 ಕೋಟಿ ರೂ. ವರಮಾನ ಬಂದಿದೆ. ಅಲ್ಲಿಗೆ ದಿನಕ್ಕೆ ಸುಮಾರು 1 ಕೋಟಿ ರೂ.ರಷ್ಟು ವರಮಾನದಲ್ಲಿ ಕುಂಠಿತವಾಗಿದೆ.
2016-17ನೇ ಸಾಲಿಗೆ ಒಟ್ಟಾರೆ ಆದಾಯ ಗುರಿ ಸುಮಾರು 1400 ಕೋಟಿ ರೂ. ಆಗಿತ್ತು. ಇದರಲ್ಲಿ ಶೇ.90ರಷ್ಟು ಸಾಧನೆ ನಿರೀಕ್ಷೆ ಇದೆ. ಸಾರಿಗೆ ಸಂಸ್ಥೆ ನೌಕರರ ವೇತನ ಹೆಚ್ಚಳದಿಂದಾಗಿ ತಿಂಗಳಿಗೆ ಸುಮಾರು 7 ಕೋಟಿ ರೂ. ವೆಚ್ಚ ಹೆಚ್ಚಿದೆ ಎಂದರು.
ಚಾಜ್‌ಶೀಟ್ ಸಲ್ಲಿಕೆಯಾಗಿದೆ: ವಾಯವ್ಯ ಸಾರಿಗೆ ಸಂಸ್ಥೆ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿದು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಮುಂದಿನ ಕ್ರಮ ಅದು ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ ಎಂದು ಅವರು ತಿಳಿಸಿದರು.